
ಆದಿತ್ಯ ಶಶಿಕುಮಾರ್ ಅಭಿನಯದ ಚಿತ್ರ
ಒಂದೇ ಚಿತ್ರದ ನಾಲ್ಕು ಬಿಟ್ ಸಾಂಗ್ಗಳನ್ನು ಒಟ್ಟಿಗೆ ಬಿಡುಗಡೆ ಮಾಡುವ ಮೂಲಕ ‘ರಾಶಿ’ ಚಿತ್ರತಂಡ ಸಂಗೀತದ ಹೊಸ ಪ್ರಯೋಗಕ್ಕೆ ಕೈಹಾಕಿದೆ. ‘ಫೀಲ್ ಆಫ್ ರಾಶಿ’ ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಈ ಹಾಡುಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಧುವನ್ ಫಿಲಂಸ್ ಲಾಂಛನದಲ್ಲಿ ಅಖಿಲೇಶ್ ಎಂ. ನಿರ್ಮಿಸಿರುವ ಈ ಚಿತ್ರಕ್ಕೆ ವಿಜಯ್ ಪಾಳೇಗಾರ್ ನಿರ್ದೇಶನವಿದೆ. ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿದ್ದು, ಸಮೀಕ್ಷಾ ನಾಯಕಿಯಾಗಿದ್ದಾರೆ.
ನಾಲ್ಕು ಬಿಟ್ ಸಾಂಗ್ಗಳಿಗೆ ನಿರ್ದೇಶಕ ವಿಜಯ್ ಪಾಳೇಗಾರ್ ಅವರೇ ಸಾಹಿತ್ಯ ರಚಿಸಿ ಸಂಗೀತ ಸಂಯೋಜಿಸಿದ್ದಾರೆ. ಜನಪ್ರಿಯ ಗಾಯಕರ ಧ್ವನಿಯಲ್ಲಿ ಮೂಡಿಬಂದಿರುವ ಹಾಡುಗಳು ಡಿ ಬಿಟ್ಸ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದ್ದು, ಚಿತ್ರದ ಸಂಗೀತದ ವಿಭಿನ್ನ ಪ್ರಯತ್ನ ಗಮನ ಸೆಳೆಯುತ್ತಿದೆ.
ಕಾಮಿಡಿ, ಪ್ರೀತಿ ಹಾಗೂ ಕೌಟುಂಬಿಕ ಭಾವನೆಗಳ ಸಮ್ಮಿಲನವಾಗಿರುವ ಈ ಚಿತ್ರಕ್ಕೆ ನಿರ್ಮಾಪಕ ಅಖಿಲೇಶ್ ಎಂ. ಕಥೆ ಬರೆದಿದ್ದಾರೆ. ನವೀನ್ ಸೂರ್ಯ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ಮಹೇಶ್ ಸಾತನೂರು ಕಲಾ ನಿರ್ದೇಶನ ಚಿತ್ರಕ್ಕಿದೆ.
ರಮೇಶ್ ಇಂದಿರಾ, ತಬಲಾ ನಾಣಿ, ವೀಣಾ ಸುಂದರ್, ಮಂಜು ಪಾವಗಡ, ಕರಿ ಸುಬ್ಬು, ವಿನೋದ್ ಗೊಬ್ಬರಗಾಲ, ಹುಲಿ ಕಾರ್ತಿಕ್, ವರ್ಧನ್ ತೀರ್ಥಹಳ್ಳಿ, ಉಗ್ರಂ ರವಿ ಹಾಗೂ ಭಜರಂಗಿ ಪ್ರಸನ್ನ ತಾರಾಗಣದಲ್ಲಿದ್ದಾರೆ.
ಈಗಾಗಲೇ ‘ಪ್ರೇಮದ ಊರಲಿ’ ಚಿತ್ರದ ಮೂಲಕ ಗಮನ ಸೆಳೆದಿರುವ ತಂಡದಿಂದ ಮೂಡಿಬಂದಿರುವ ‘ರಾಶಿ’, ನವೆಂಬರ್ 13ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.




















