Home ಜಿಲ್ಲೆ ಜನವಾಡ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಎಸ್‌ಸಿ (ಮಹಿಳೆ) ಮೀಸಲಾತಿ ಬದಲಿಸದಂತೆ ವಿವಿಧ ಸಂಘಟನೆಗಳ ಆಗ್ರಹ

ಜನವಾಡ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಎಸ್‌ಸಿ (ಮಹಿಳೆ) ಮೀಸಲಾತಿ ಬದಲಿಸದಂತೆ ವಿವಿಧ ಸಂಘಟನೆಗಳ ಆಗ್ರಹ

ಬೀದರ್: ಬೀದರ್ ತಾಲೂಕಿನ ಜನವಾಡ ಹೋಬಳಿಗೆ ಸುಮಾರು ೨೫ರಿಂದ ೩೦ ವರ್ಷಗಳ ನಂತರ ೨೦೨೬-೨೭ನೇ ಸಾಲಿನ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಯಲ್ಲಿ ಅನುಸೂಚಿತ ಜಾತಿ (ಮಹಿಳೆ) ಮೀಸಲಾತಿ ಲಭಿಸಿರುವುದನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂದು ವಿವಿಧ ದಲಿತ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ಸರ್ಕಾರದ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾದ ಮೀಸಲಾತಿ ಪಟ್ಟಿಯ ಪ್ರಕಾರ ಜನವಾಡ ಹೋಬಳಿಯ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕ್ರಮ ಸಂಖ್ಯೆ ೧೬ರಲ್ಲಿ ಅನುಸೂಚಿತ ಜಾತಿ (ಮಹಿಳೆ) ಮೀಸಲಾತಿ ನಿಗದಿಪಡಿಸಲಾಗಿದೆ. ಸುಮಾರು ಮೂರು ದಶಕಗಳ ಬಳಿಕ ಈ ಮೀಸಲಾತಿ ದೊರೆತಿರುವುದರಿಂದ ಜನವಾಡ ಹೋಬಳಿ ವ್ಯಾಪ್ತಿಯ ಜನರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಮೀಸಲಾತಿಯಿಂದ ಪರಿಶಿಷ್ಟ ಜಾತಿಯ ಮಹಿಳೆಯರಿಗೆ ಸ್ಥಳೀಯ ಆಡಳಿತದಲ್ಲಿ ರಾಜಕೀಯ ಪ್ರಾತಿನಿಧ್ಯ ಪಡೆಯಲು ಉತ್ತಮ ಅವಕಾಶ ದೊರೆತಿದೆ. ಹೀಗಾಗಿ ಈಗಾಗಲೇ ಅಧಿಕೃತವಾಗಿ ಪ್ರಕಟಿಸಿರುವ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವನಾಯಕ ಡಾ.ಬಿ.ಆರ್. ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಮಹೇಂದ್ರಕುಮಾರ ಹೊಸಮನಿ, , ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ಸಾಯಿಸಿಂಧೆ, ಬಹುಜನ ಯೂತ್ ಪ್ಯಾಂಥರ್ ಜಿಲ್ಲಾಧ್ಯಕ್ಷ ಪುಟ್ಟರಾಜ ದೀನೆ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಸಂದೀಪ ಕಾಂಟೆ, ಸಮಾಜಮುಖಿ ಹೋರಾಟಗಾರ ಸಂಗಮೇಶ್ವರ ಭಾವಿದೊಡ್ಡಿಡಾ.ಅಂ.ಪ್ರಜಾ ಸೇನೆಯ ರಾಜ್ಯ ಕಾರ್ಯದರ್ಶಿ ರಮೇಶ ಪಾಸ್ವಾನ, ವಿನೋದ ಸಿಂಧೆ ಹಾಗೂ ಸಂತೋಷ ಸಂಗಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.