
ಮಂಗಳೂರು- ಪೊಲೀಸ್ ವಿಚಾರಣೆಯಿಂದ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಮೃತದೇಹವನ್ನಿಟ್ಟು ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ಸುರತ್ಕಲ್ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆದಿದೆ. ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತಾಯಿತು.
ಸುರತ್ಕಲ್ನ ಹೊಸಬೆಟ್ಟು ನಿವಾಸಿ ಸೋಮನಾಥ (೪೮) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅಕ್ಟೋಬರ್ ೨೫ರ ರಾತ್ರಿ ಹೊಸಬೆಟ್ಟು ಬೀಚ್ ಬಳಿ ಕಂಡುಬAದಿದ್ದ ಜೋಡಿಯನ್ನು ಸೋಮನಾಥ ಪ್ರಶ್ನಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವತಿಯೊಬ್ಬರು ಸೋಮನಾಥ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಸೋಮನಾಥ ಅವರನ್ನು ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ್ದರು.
ಪೊಲೀಸ್ ವಿಚಾರಣೆಯಿಂದ ಮನನೊಂದು ಸೋಮನಾಥ ಅವರು ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸ್ ದೌರ್ಜನ್ಯವೇ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿರುವ ಸ್ಥಳೀಯರು, ಮೃತದೇಹವನ್ನು ಸುರತ್ಕಲ್ ಪೊಲೀಸ್ ಠಾಣೆಯ ಮುಂಭಾಗದಲ್ಲಿಟ್ಟು ಪ್ರತಿಭಟನೆ ನಡೆಸಿದರು. ನೂರಾರು ಮಂದಿ ಸ್ಥಳೀಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಶಾಸಕ ಡಾ. ವೈ. ಭರತ್ ಶೆಟ್ಟಿ ಭೇಟಿ ನೀಡಿ, ಪೊಲೀಸರೊಂದಿಗೆ ಮಾತುಕತೆ ನಡೆಸಿದರು.
ಈ ಕುರಿತು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದು, ಪ್ರತಿಭಟನಾಕಾರರು ಹಿಂತಿರುಗುವ ಸಂದರ್ಭದಲ್ಲಿ ದೂರು ನೀಡಿದ ಯುವತಿ ಮತ್ತು ಆಕೆಯ ಪ್ರಿಯಕರನ ವಿರುದ್ಧವೂ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು. ಅವರಿಬ್ಬರೇ ಸೋಮನಾಥ ಅವರ ಸಾವಿಗೆ ಕಾರಣ ಎಂದು ಆರೋಪಿಸಿದರು.
ಈ ಬಗ್ಗೆ ದೂರು ನೀಡಲು ಇಚ್ಛಿಸಿದರೆ ದೂರು ಸಲ್ಲಿಸಬಹುದು. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರಿಗೆ ತಿಳಿಸಲಾಯಿತು. ಬಳಿಕ ಅವರು ಮೃತದೇಹವನ್ನು ತೆಗೆದುಕೊಂಡು ಅಲ್ಲಿಂದ ತೆರಳಿದರು. ನಂತರ ಸಂಚಾರ ಸುಗಮವಾಯಿತು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

























