
ಬೆಂಗಳೂರು, ಅ. ೨೬- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂಟಿಯಾಗುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ಅವರೊಂದಿಗಿದ್ದೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ನವೆಂಬರ್ ೧ರಂದು ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಹಿನ್ನೆಲೆಯಲ್ಲಿ, ಅಂದು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಭೇಟಿಯ ವೇಳೆ ಏನು ಚರ್ಚೆಯಾಗಲಿದೆ ಎಂಬುದು ತಮಗೆ ತಿಳಿದಿಲ್ಲ. ಅಲ್ಲಿಗೆ ಹೋದ ಬಳಿಕ ನಡೆಯುವ ಮಾತುಕತೆಗಳ ಬಗ್ಗೆ ಮಾಹಿತಿ ಲಭ್ಯವಾಗಬಹುದು. ಸಿದ್ದರಾಮಯ್ಯ ಅವರು ಒಂಟಿಯಾಗಿದ್ದಾರೆ ಎಂಬ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ಅವರ ಬೆಂಬಲಕ್ಕೆ ಇದ್ದೇವೆ ಎಂದು ಸ್ಪಷ್ಟಪಡಿಸಿದರು.
ಸ್ಟಿಂಗ್ ಕಾರ್ಯಾಚರಣೆ ಪ್ರಕರಣದ ವಿರುದ್ಧ ಸಿದ್ದರಾಮಯ್ಯ ಅವರು ದೂರು ನೀಡುವುದಾಗಿ ಹೇಳಿದ್ದಾರೆಯೇ ಎಂಬ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಲಿಲ್ಲ.
ಬರ ಪರಿಹಾರ ಬಿಡುಗಡೆಗೆ ಆದೇಶ
ರೈತರಿಗೆ ೨,೫೦೦ ಬರ ಪರಿಹಾರ ಬಿಡುಗಡೆ ಮಾಡುವ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಪರಿಹಾರದ ಹಣ ಬಿಡುಗಡೆಗೆ ತಾವು ಕೇವಲ ಒತ್ತಾಯ ಮಾಡುವುದಿಲ್ಲ, ಬದಲಿಗೆ ಆದೇಶ ಮಾಡುತ್ತೇನೆ ಎಂದು ಹೇಳಿದರು.
ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ಒದಗಿಸುವ ವಿಚಾರದಲ್ಲಿ ತಮ್ಮ ನಿಲುವನ್ನು ಅವರು ಈ ಮೂಲಕ ಸ್ಪಷ್ಟಪಡಿಸಿದರು.
ಅರ್ಹ ಸ್ಥಳೀಯರಿಗೆ ಉದ್ಯೋಗ ನೀಡಬೇಕು
ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡುವ ನಿಯಮವನ್ನು ಪಾಲಿಸಬೇಕು ಎಂದು ಹೇಳಿದರು.
ಕಾರ್ಖಾನೆಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂಬ ಆಶಯವಿರುತ್ತದೆ. ಅದೇ ರೀತಿ ಕಂಪನಿಗಳು ಕೂಡ ಅರ್ಹತೆ ಹೊಂದಿರುವ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
























