
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ಪಶುವೈದ್ಯರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ. ಗೀತಾ ಅವರನ್ನು ಅ. 19ರವರೆಗೆ ಜಾರಿ ನಿರ್ದೇಶನಾಲಯ (ಇಡಿ) ಕಸ್ಟಡಿಗೆ ನೀಡಿ ನಗರದ 4ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.
ಆರೋಪಿಗಳು ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ನ್ಯಾಯಾಧೀಶರು ಸೂಚಿಸಿ, ಕಸ್ಟಡಿ ಅವಧಿಯಲ್ಲಿ ಆರೋಪಿಗಳ ಆರೋಗ್ಯದ ಬಗ್ಗೆ ನಿಯಮಿತವಾಗಿ ತಪಾಸಣೆ ನಡೆಸುವಂತೆ ಇಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಕೇವಲ ಮೆಡಿಕಲ್ ರಿಪೋರ್ಟ್ಗಳನ್ನು ತಂದುಕೊಂಡು ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬಾರದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಆರೋಪಿಗಳ ಪರ ವಕೀಲರ ವಾದ
ಶಿವಶಂಕರಪ್ಪ ಪರ ವಕೀಲರು, ಪ್ರಕರಣದ ತನಿಖೆಯಲ್ಲಿ ಕೇಂದ್ರ ಮತ್ತು ರಾಜ್ಯ ತನಿಖಾ ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ ಎಂದು ವಾದಿಸಿದರು.
ಕೆಪಿಎಸ್ ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಹಣ ವಶಪಡಿಸಿಕೊಳ್ಳಲಾಗಿಲ್ಲ. ತಮ್ಮ ಕಕ್ಷಿದಾರರು ಎಲ್ಲಿಯೂ ಪರಾರಿಯಾಗುವುದಿಲ್ಲ, ಇಲ್ಲಿಯೇ ಇರುತ್ತಾರೆ ಹಾಗೂ ತನಿಖೆಗೆ ಸಹಕರಿಸುತ್ತಾರೆ. ಹೀಗಾಗಿ ಇಡಿ ಕಸ್ಟಡಿಗೆ ನೀಡುವ ಅಗತ್ಯವಿಲ್ಲ ಎಂದು ವಾದಿಸಿದರು.ಇದೇ ವೇಳೆ ಶಿವಶಂಕರಪ್ಪ ಪರ ವಕೀಲರು ಮಧ್ಯಂತರ ಜಾಮೀನಿಗೂ ಅರ್ಜಿ ಸಲ್ಲಿಸಿದರು.
ಇಡಿ ಪರ ವಕೀಲರ ಆರೋಪ:
ಇಡಿ ಪರ ವಕೀಲ ಮಧುರಾವ್ ಅವರು, ಆರೋಪಿಗಳು ತನಿಖೆಗೆ ಸಹಕರಿಸದೆ ವಿವಿಧ ನೆಪಗಳನ್ನು ಹೇಳಿಕೊಂಡು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ವಾದಿಸಿದರು. ತನಿಖೆಗೆ ಸಮರ್ಪಕವಾಗಿ ಸಹಕರಿಸಿದ್ದರೆ ಕಸ್ಟಡಿಗೆ ಕೇಳುವ ಅಗತ್ಯವೇ ಇರುತ್ತಿರಲಿಲ್ಲ ಎಂದರು.
ಶಿವಶಂಕರಪ್ಪ ಅವರ ಸಹಾಯಕರು ಬ್ಯಾಂಕ್ಗೆ ಹಣ ಜಮೆ ಮಾಡಿರುವ ದಾಖಲೆಗಳು ಲಭ್ಯವಾಗಿವೆ. ಗೀತಾ ಅವರ ಪುತ್ರಿಯೂ ಬ್ಯಾಂಕ್ಗೆ ಹಣ ಜಮೆ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ. ಹಣ ಜಮೆ ಮಾಡಿ ಅದರ ಸ್ವೀಕೃತಿ ದಾಖಲೆಯನ್ನೂ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿತು.
ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಯ ಜೊತೆಗೆ ಉತ್ತರಗಳನ್ನೂ ನೀಡಲಾಗಿದೆ. ವಿನುತಾ ಹಾಲಪ್ಪ ಹಾಗೂ ನಂದೀಶ್ ಉಲ್ಕುಕಟ್ಟೆ ಅವರ ಒಎಂಆರ್ ಶೀಟ್ಗಳನ್ನು ತಿದ್ದಿರುವುದು ಪತ್ತೆಯಾಗಿದ್ದು, ಈ ಸಂಬಂಧ ಈಗಾಗಲೇ ಅವರ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ಇಡಿ ತಿಳಿಸಿತು.
₹50 ಲಕ್ಷ ಲಂಚಕ್ಕೆ ಬೇಡಿಕೆ:
2026ರ ಜನವರಿ 8ರಂದು ಅಭ್ಯರ್ಥಿಗಳಿಗೆ ಸರಿಯಾದ ಉತ್ತರಗಳನ್ನು ಒದಗಿಸಲಾಗಿತ್ತು. ಅಭ್ಯರ್ಥಿಗಳ ಅಂತಿಮ ಆಯ್ಕೆಗೆ ಮುನ್ನ ವಿನುತಾ ಹಾಲಪ್ಪ ಹಾಗೂ ಅವರ ತಂದೆ ಶಿವಶಂಕರಪ್ಪ ಅವರನ್ನು ಸಂಪರ್ಕಿಸಿ ಹೋಟೆಲ್ನಲ್ಲಿ ಭೇಟಿಯಾಗಿದ್ದರು. ಈ ವೇಳೆ ಲಂಚದ ಹಣದ ವ್ಯವಹಾರ ನಡೆದಿರುವ ಆರೋಪವಿದೆ.
ಡಾಲರ್ಸ್ ಕಾಲೋನಿಯಲ್ಲಿರುವ ಶಿವಶಂಕರಪ್ಪ ಅವರ ನಿವಾಸದಲ್ಲಿಯೂ ಭೇಟಿ ನಡೆದಿತ್ತು. ವಿನುತಾ ಹಾಲಪ್ಪ ಅವರಿಂದ ₹50 ಲಕ್ಷ ಲಂಚಕ್ಕೆ ಬೇಡಿಕೆ ಇಡಲಾಗಿದ್ದು, ಮೊದಲ ಹಂತದಲ್ಲಿ ಶಿವಶಂಕರಪ್ಪ ₹10 ಲಕ್ಷ ಪಡೆದಿದ್ದರು ಎಂದು ಇಡಿ ಪರ ವಕೀಲರು ಆರೋಪಿಸಿದರು.
ಅಭ್ಯರ್ಥಿಗಳನ್ನು ರೆಸಾರ್ಟ್, ಹೋಟೆಲ್ಗಳಲ್ಲಿ ಇರಿಸಿದ್ದ ಆರೋಪ
ಪರೀಕ್ಷೆಗೂ ಮುನ್ನ ಕೆಲವು ಅಭ್ಯರ್ಥಿಗಳನ್ನು ರೆಸಾರ್ಟ್ ಹಾಗೂ ಹೋಟೆಲ್ಗಳಲ್ಲಿ ಇರಿಸಲಾಗಿತ್ತು. ಆ ಸಂದರ್ಭದಲ್ಲಿ ಅವರ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಸಲಾಗಿತ್ತು. ಪರೀಕ್ಷೆಯ ದಿನ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಡ್ರಾಪ್ ಮಾಡಲಾಗಿತ್ತು ಎಂದು ಇಡಿ ನ್ಯಾಯಾಲಯಕ್ಕೆ ಮಾಹಿತಿ ನೀಡಿತು.
ಕೆಲವು ಅಭ್ಯರ್ಥಿಗಳಿಂದ ₹80 ಲಕ್ಷಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನಲ್ಲಿ ₹40 ಲಕ್ಷ ಪಡೆಯಲಾಗಿತ್ತು. ಕೆಲಸ ಖಚಿತವಾದ ಬಳಿಕ ಉಳಿದ ₹40 ಲಕ್ಷ ನೀಡುವಂತೆ ಸೂಚಿಸಲಾಗಿತ್ತು ಎಂಬ ಆರೋಪವನ್ನೂ ಇಡಿ ಮಾಡಿದೆ.
ಕನ್ನಡ ಹಾಗೂ ಜನರಲ್ ಸೈನ್ಸ್ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದ್ದು, ಆರೋಪಿಗಳಿಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ತನಿಖಾ ಸಂಸ್ಥೆ ತಿಳಿಸಿತು.
ಮಹತ್ವದ ದಾಖಲೆ ಪತ್ತೆ:
ಕೆಪಿಎಸ್ ಸಿ ಕಚೇರಿ ಮೇಲೆ ನಡೆಸಿದ ದಾಳಿ ವೇಳೆ ಮಹತ್ವದ ಸಾಕ್ಷ್ಯಗಳು ಪತ್ತೆಯಾಗಿವೆ. ಅಭ್ಯರ್ಥಿಗಳು ನೀಡಿದ್ದ ಬ್ಲಾಂಕ್ ಚೆಕ್ಗಳು ಹಾಗೂ ಪ್ರಾಮಿಸರಿ ನೋಟ್ಗಳು ಕೂಡ ಸಿಕ್ಕಿವೆ ಎಂದು ಇಡಿ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಈ ಎಲ್ಲ ಅಂಶಗಳ ಆಧಾರದ ಮೇಲೆ ಪ್ರಕರಣದಲ್ಲಿ ಇನ್ನಷ್ಟು ತನಿಖೆ ನಡೆಸಬೇಕಿರುವುದರಿಂದ ಆರೋಪಿಗಳನ್ನು ಕಸ್ಟಡಿಗೆ ನೀಡಬೇಕು ಎಂದು ಮಧುರಾವ್ ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಶಿವಶಂಕರಪ್ಪ ಸಾಹುಕಾರ್ ಹಾಗೂ ಬಿ.ವಿ. ಗೀತಾ ಅವರನ್ನು ಅಕ್ಟೋಬರ್ 19ರವರೆಗೆ ಇಡಿ ಕಸ್ಟಡಿಗೆ ನೀಡಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.
























