Home ಮುಖಪುಟ ಸುದ್ದಿ ಬೇಸ್‌ಮೆಂಟ್ ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಕ್ರಮ

ಬೇಸ್‌ಮೆಂಟ್ ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಕ್ರಮ

ಬೆಂಗಳೂರು, ಸೆ.೩- ವಾಣಿಜ್ಯ ಕಟ್ಟಡಗಳ ಬೇಸ್‌ಮೆಂಟ್‌ಗಳನ್ನು ಪಾರ್ಕಿಂಗ್ ಬದಲು ಅನಧಿಕೃತವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವವರ ವಿರುದ್ಧ ನೋಟಿಸ್ ಜಾರಿ ಮಾಡಿ, ಬಳಕೆ ಮುಂದುವರಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅಧಿಕಾರಿಗಳಿಗೆ ಸೂಚಿಸಿದರು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಸತೀಶ್ ರೆಡ್ಡಿ ಅವರೊಂದಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು ಎಚ್‌ಎಸ್‌ಆರ್ ಲೇಔಟ್‌ನ ಟ್ವಿನ್ ಪಾರ್ಕ್ ಮತ್ತು ಅರಕೆರೆ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.


ಚರಂಡಿ, ಮಳೆ ನೀರು ಸಮಸ್ಯೆಗೆ ಪರಿಹಾರ


ಮಡಿವಾಳ, ಬಿಟಿಎಂ ಲೇಔಟ್ ಹಾಗೂ ಪುಟ್ಟೇನಹಳ್ಳಿ ಭಾಗದಿಂದ ಹರಿದುಬರುವ ಮಳೆ ನೀರು ಎಚ್‌ಎಸ್‌ಆರ್ ಲೇಔಟ್ ಮೂಲಕ ಬೆಳ್ಳಂದೂರು ಕೆರೆಗೆ ಸೇರುತ್ತದೆ. ಮಳೆಗಾಲದಲ್ಲಿ ಸರ್ವಿಸ್ ರಸ್ತೆಯ ಪಕ್ಕದ ಕಾಲುವೆಗಳಲ್ಲಿ ನೀರು ಉಕ್ಕಿ ಮನೆಗಳಿಗೆ ನುಗ್ಗುತ್ತಿರುವ ಬಗ್ಗೆ ನಿವಾಸಿಗಳು ಅಧಿಕಾರಿಗಳ ಗಮನಕ್ಕೆ ತಂದರು.
ಈ ಹಿನ್ನೆಲೆಯಲ್ಲಿ ಮಳೆ ನೀರುಗಾಲುವೆಗಳಲ್ಲಿರುವ ಹೂಳು ಹಾಗೂ ತ್ಯಾಜ್ಯವನ್ನು ಸಕ್ಷನ್ ಪಂಪ್ ಮತ್ತು ರೋಬೋಟಿಕ್ ಯಂತ್ರಗಳ ಮೂಲಕ ತ್ವರಿತವಾಗಿ ತೆರವುಗೊಳಿಸುವಂತೆ ಮಹೇಶ್ವರ ರಾವ್ ಸೂಚಿಸಿದರು. ಅಗತ್ಯವಿದ್ದಲ್ಲಿ ಸರ್ವಿಸ್ ರಸ್ತೆಯಲ್ಲಿ ಪ್ರತ್ಯೇಕ ಚರಂಡಿ ವ್ಯವಸ್ಥೆ ಕಲ್ಪಿಸುವಂತೆಯೂ ತಿಳಿಸಿದರು.


ರಸ್ತೆ, ಕೆರೆ ಅಭಿವೃದ್ಧಿಗೆ ವೇಗ


ಸೋಮಸುಂದರಪಾಳ್ಯ ಸೇರಿದಂತೆ ಬೊಮ್ಮನಹಳ್ಳಿ ವ್ಯಾಪ್ತಿಯ ಕೆರೆಗಳಿಗೆ ತಂತಿಬೇಲಿ ಅಳವಡಿಸಿ, ಅಭಿವೃದ್ಧಿ ಕಾಮಗಾರಿಗಳಿಗೆ ಕೂಡಲೇ ಟೆಂಡರ್ ಕರೆಯುವಂತೆ ಸೂಚಿಸಲಾಯಿತು. ಬನ್ನೇರುಘಟ್ಟ ರಸ್ತೆಯ ಜೆ.ಡಿ.ಮರದಿಂದ ಐಐಎಂಬಿವರೆಗಿನ ವೈಟ್‌ಟಾಪಿಂಗ್ ಹಾಗೂ ದುರಸ್ತಿ ಕಾಮಗಾರಿಗಳನ್ನು ಸಂಚಾರಕ್ಕೆ ತೊಂದರೆಯಾಗದಂತೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಸಿಂಗಸಂದ್ರ ಮತ್ತು ಎಇಸಿಎಸ್ ಲೇಔಟ್‌ಗಳ ಪಾಲಿಕೆ ವಲಯ ಗಡಿ ಕುರಿತ ಗೊಂದಲವನ್ನೂ ಶೀಘ್ರ ಬಗೆಹರಿಸುವಂತೆ ನಿರ್ದೇಶನ ನೀಡಿದರು.


ಕಸ ನಿರ್ವಹಣೆಗೆ ಜಿಪಿಎಸ್, ಸಿಸಿಟಿವಿ


ಬಿಳೇಕಹಳ್ಳಿ ಸೇರಿದಂತೆ ಬೊಮ್ಮನಹಳ್ಳಿ ಕ್ಷೇತ್ರದ ಎಂಟು ವಾರ್ಡ್‌ಗಳ ಕಸ ಸಂಗ್ರಹಣಾ ಆಟೋಗಳಿಗೆ ಜಿಪಿಎಸ್ ಅಳವಡಿಸುವಂತೆ ಸೂಚಿಸಲಾಯಿತು. ಸೆಕೆಂಡರಿ ಟ್ರಾನ್ಸ್‌ಫರ್ ಪಾಯಿಂಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಿ, ಸ್ವಚ್ಛತಾ ಕಾರ್ಯದ ಮೇಲ್ವಿಚಾರಣೆ ಬಿಗಿಗೊಳಿಸುವಂತೆ ತಿಳಿಸಲಾಯಿತು.
ವಾಣಿಜ್ಯ ಸಂಸ್ಥೆಗಳು ರಸ್ತೆ ಬದಿ ಕಸ ಎಸೆಯದೆ, ತಮ್ಮ ಆವರಣದಲ್ಲೇ ಡಸ್ಟ್‌ಬಿನ್ ಇರಿಸಿ ಪಾಲಿಕೆ ವಾಹನಗಳಿಗೆ ಕಸ ಹಸ್ತಾಂತರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.


ಪಾದಚಾರಿ ಮಾರ್ಗ ಒತ್ತುವರಿಗೆ ಕಡಿವಾಣ


ಎಚ್‌ಎಸ್‌ಆರ್ ಲೇಔಟ್‌ನ ೧೯ನೇ ಮೇನ್‌ನ ಜೈ ಶ್ರೀರಾಮ್ ವೃತ್ತ, ೧೭ನೇ ಹಾಗೂ ೨೭ನೇ ಕ್ರಾಸ್‌ಗಳಲ್ಲಿ ಪಾದಚಾರಿ ಮಾರ್ಗಗಳನ್ನು ಪರಿಶೀಲಿಸಲಾಯಿತು. ಯುಜಿಸಿ ಕೇಬಲ್ ಅಳವಡಿಕೆಗಾಗಿ ರಸ್ತೆ ಮತ್ತು ಪಾದಚಾರಿ ಮಾರ್ಗ ಅಗೆದು ದುರಸ್ತಿ ಮಾಡದೆ ಬಿಟ್ಟಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ಸೂಚಿಸಲಾಯಿತು. ನಿಗದಿತ ಅವಧಿಯಲ್ಲಿ ದುರಸ್ತಿ ಮಾಡದಿದ್ದರೆ ಪಾಲಿಕೆಯೇ ಕಾಮಗಾರಿ ಕೈಗೊಂಡು ದುಪ್ಪಟ್ಟು ವೆಚ್ಚವನ್ನು ಗುತ್ತಿಗೆದಾರರಿಂದ ವಸೂಲಿ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.


’ವ್ಯಾಗಲ್ ಅಪ್’ ಸೇರಿದಂತೆ ಬೇಸ್‌ಮೆಂಟ್‌ಗಳನ್ನು ಅನಧಿಕೃತವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ಅಂಗಡಿಗಳಿಗೂ ನೋಟಿಸ್ ನೀಡಿ, ಬಳಕೆ ನಿಲ್ಲಿಸುವಂತೆ ಸೂಚಿಸಲಾಯಿತು.

೨೦೦ ಕೋಟಿಯ ಸಿಎ ನಿವೇಶನಗಳ ರಕ್ಷಣೆ:


ಅರಕೆರೆ ವಾರ್ಡ್‌ನಲ್ಲಿ ಸುಮಾರು ೨೦೦ ಕೋಟಿಗೂ ಅಧಿಕ ಮೌಲ್ಯದ ಸಿಎ ನಿವೇಶನಗಳು ಒತ್ತುವರಿಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಬಿಡಿಎ ಮತ್ತು ಪಾಲಿಕೆ ಅಧಿಕಾರಿಗಳು ಜಂಟಿಯಾಗಿ ಸರ್ವೇ ನಡೆಸಿ ಪ್ರತಿಯೊಂದು ಸಿಎ ನಿವೇಶನ ಹಾಗೂ ಪಾರ್ಕ್‌ನ ಗಡಿ ಗುರುತಿಸುವಂತೆ ಆಯುಕ್ತ ಕೆ.ಎನ್. ರಮೇಶ್ ಸೂಚಿಸಿದರು.


ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಿ ತಂತಿಬೇಲಿ ಅಳವಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬಿಡಿಎ ಲೇಔಟ್‌ಗಳ ಸಿಎ ನಿವೇಶನಗಳು ಹಾಗೂ ಬಿಟಿಎಂ ೫ನೇ ಹಂತದ ಬಿಎಂಟಿಸಿ ಬಸ್ ನಿಲ್ದಾಣದ ಜಾಗ ಒತ್ತುವರಿ ತೆರವುಗೊಳಿಸುವಂತೆಯೂ ಶಾಸಕ ಸತೀಶ್ ರೆಡ್ಡಿ ಮನವಿ ಮಾಡಿದರು.


?೫ ಕೋಟಿ ಒಳಾಂಗಣ ಕ್ರೀಡಾಂಗಣಕ್ಕೆ ಕಾಯಕಲ್ಪ


ಅರಕೆರೆಯಲ್ಲಿ ೫ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ನಿರ್ವಹಣೆ ಇಲ್ಲದೆ ದುಷ್ಕರ್ಮಿಗಳ ತಾಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ತಕ್ಷಣ ದುರಸ್ತಿ ಕೈಗೊಂಡು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಸೂಚಿಸಿದರು.


ಅರಕೆರೆ ಮತ್ತು ಹುಳಿಮಾವು ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಯಿತು. ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆಯುವ ಜಲಮಂಡಳಿ, ಕಾಮಗಾರಿ ಮುಗಿದ ಕೂಡಲೇ ವೈಜ್ಞಾನಿಕವಾಗಿ ರಸ್ತೆ ಪುನಶ್ಚೇತನಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ಅಗೆಯಲು ಅನುಮತಿ ನೀಡುವುದಿಲ್ಲ ಎಂದು ಆಯುಕ್ತರು ಎಚ್ಚರಿಸಿದರು.

ಟೋಯಿಂಗ್‌ಗೆ ಸೂಚನೆ: ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಸಂಚಾರ ಪೊಲೀಸರ ಸಹಕಾರದೊಂದಿಗೆ ಟೋಯಿಂಗ್ ಕಾರ್ಯಾಚರಣೆ ನಡೆಸಿ ದಂಡ ವಿಧಿಸುವಂತೆಯೂ, ಅಗತ್ಯ ಸ್ಥಳಗಳಲ್ಲಿ ಸಿಗ್ನಲ್ ಮತ್ತು ರಸ್ತೆ ವಿಭಜಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆಯೂ ಸೂಚಿಸಲಾಯಿತು.
ಪಾಲಿಕೆ ಅಪರ ಆಯುಕ್ತ ಡಾ. ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಮಾಲತಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.