Home Lead News ಮುಡಾ ಹಗರಣ: 50:50 ಹಂಚಿಕೆಯಾಗಿದ್ದ ನಿವೇಶನಗಳು ರದ್ದು

ಮುಡಾ ಹಗರಣ: 50:50 ಹಂಚಿಕೆಯಾಗಿದ್ದ ನಿವೇಶನಗಳು ರದ್ದು

ಮೈಸೂರು, ಆ.19-ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮ‌ ಉಲ್ಲಂಘಿಸಿ ಮಾಡಲಾಗಿದ್ದ 50:50 ಬದಲಿ ನಿವೇಶನಗಳ ಹಂಚಿಕೆಯನ್ನು ರಾಜ್ಯ ಸರ್ಕಾರ ರದ್ದು ಮಾಡಿ ಇಂದು ಆದೇಶ ಹೊರಡಿಸಿದೆ.


ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ, ಉನ್ನತ ಮಟ್ಟದ ತಾಂತ್ರಿಕ ಸಮಿತಿ ನೀಡಿರುವ ವರದಿಯ ಆಧಾರದ ಮೇಲೆ ಈ ಆದೇಶ ಮಾಡಲಾಗಿದೆ.


ಜಾರಿಗೆ ಬರುವಂತೆ 2023ರ ಮಾರ್ಚ್ 14ರ ನಿರ್ದೇಶನವನ್ನ ಉಲ್ಲಂಘಿಸಿ ಮಾಡಲಾದ ಎಲ್ಲಾ 50:50 ಬದಲಿ ನಿವೇಶನಗಳ ಹಂಚಿಕೆಯನ್ನ ರದ್ದುಪಡಿಸಿದೆ.


ನಿಯಮ ಉಲ್ಲಂಘಿಸಿ ಈಗಾಗಲೇ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿಯಾಗಿರುವ ಬದಲಿ ನಿವೇಶನಗಳ ‘ಕ್ರಯಪತ್ರ’ಗಳನ್ನು ರದ್ದುಪಡಿಸಲು ಸಿವಿಲ್ ನ್ಯಾಯಾಲಯದಲ್ಲಿ ತಕ್ಷಣವೇ ದಾವೆ ಹೂಡುವುದು.


ಇದುವರೆಗೆ ಕ್ರಯಪತ್ರವಾಗದ ಪ್ರಕರಣಗಳಲ್ಲಿ, ಸರ್ಕಾರದಿಂದ ಸ್ಪಷ್ಟ ಮಾರ್ಗಸೂಚಿ ರಚನೆಯಾಗಿ ಸೂಕ್ತ ನಿರ್ದೇಶನ ಬರುವವರೆಗೂ ಪ್ರಾಧಿಕಾರದಿಂದ ಯಾವುದೇ ಕ್ರಯಪತ್ರಗಳನ್ನ ನೀಡದಂತೆ ಹೇಳಿದೆ.

ಈಗಾಗಲೇ ನೋಂದಣಿಯಾಗಿರುವ ನಿವೇಶನಗಳಿಗೆ ಖಾತಾ ಮಾಡಿಕೊಡುವುದನ್ನೂ ತಡೆಹಿಡಿಯಲು ಮೈಸೂರು ಮಹಾನಗರ ಪಾಲಿಕೆ, ಸಂಬಂಧಪಟ್ಟ ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡುವಂತೆ ಸೂಚನೆ ನೀಡಿದೆ.


ಸೂಚನೆ ಪಾಲನೆ ಮಾಡಲು ವಿಫಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.


ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 1,100, 50:50 ಬದಲಿ ನಿವೇಶನಗಳನ್ನು ರದ್ದುಪಡಿಸಲು ಸರ್ಕಾರ ನಿರ್ದೇಶನ ನೀಡಿದೆ. ಇದರ ಮೌಲ್ಯ ಸರಿ ಸುಮಾರು 2,000 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ.