Home ಜಿಲ್ಲೆ ಮೈಸೂರು ಶಿಕ್ಷಣದಲ್ಲಿ ಕನ್ನಡ ನೆಲೆಯೂರಬೇಕು: ಬರಗೂರು

ಶಿಕ್ಷಣದಲ್ಲಿ ಕನ್ನಡ ನೆಲೆಯೂರಬೇಕು: ಬರಗೂರು

ಸಂಜೆವಾಣಿ ನ್ಯೂಸ್
ಮೈಸೂರು, ಆ.19:-
ಶಿಕ್ಷಣದಲ್ಲಿ ಕನ್ನಡ ನೆಲೆಯೂರಬೇಕು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಪೆÇ್ರ.ಸಿ.ಪಿ.ಸಿದ್ಧಾಶ್ರಮ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಆಯೋಜಿಸಿದ್ದ ಪೆÇ್ರ.ಸಿ.ಪಿ.ಸಿದ್ಧಾಶ್ರಮ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಉದ್ಘಾಟನೆ ಮತ್ತು ಶರಣ ದಂಪತಿ ಪರಸಪ್ಪ-ನಾಗಮ್ಮ ಸಾಹಿತ್ಯಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ನೆಲೆಯೂರದಿದ್ದರೆ, ಅದಕ್ಕೆ ಭವಿಷ್ಯವಿಲ್ಲ. ಅದಕ್ಕಾಗಿ ಶಿಕ್ಷಣದಲ್ಲಿ ಕನ್ನಡ ನೆಲೆಯೂರಬೇಕು. ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ನೆಲೆಯೂರಿಸುವ ಕೆಲಸವನ್ನು ಯಾವ ಸರ್ಕಾರವೂ ಮಾಡುತ್ತಿಲ್ಲ. ಅಲ್ಲಲ್ಲೇ ಕೆಲ ಸರ್ಕಾರ ಪ್ರಯತ್ನ ಮಾಡಿವೆ. ಆದರೆ, ಅದು ಸಂಪೂರ್ಣವಾಗಿ ಆಗಿಲ್ಲ ಎಂದರು.

ಶಿಕ್ಷಣದೊಳಗೆ ಕನ್ನಡ ಉಳಿಸುವ ಕೆಲಸ ಆಗಬೇಕು. ಕನ್ನಡ ಕಲಿಯದೇ ಹೋದರೆ ಭಾಷೆಗೆ ಅಷ್ಟೇ ಅಲ್ಲ, ಇಡೀ ಸಾಂಸ್ಕೃತಿಕ ಲೋಕವೇ ಬಡವಾಗಲಿದೆ. ಒಂದು ಊರಿನಲ್ಲಿ ಒಂದು ಪ್ರಾಥಮಿಕ ಶಾಲೆ ಇದ್ದರೆ ಎಲ್ಲಾ ರಾಷ್ಟ್ರೀಯ ಹಬ್ಬ ನಡೆಯುತ್ತವೆ. ಇಲ್ಲವಾದರೆ ಅಲ್ಲಿ ಆ ಸಾಂಸ್ಕೃತಿಕ ಚಟುವಟಿಕೆಗಳೇ ನಿಂತು ಹೋಗಲಿವೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಣ್ಣ ಶಾಲೆಗಳು ನಿರರ್ಥಕ ಎಂದು ಹೇಳಿದೆ. ಇದನ್ನು ವಿರೊಧಿಸಿದ್ದ ರಾಜ್ಯ ಸರ್ಕಾರ ಮಾಡುತ್ತಿರುವುದಾದರೂ ಏನು. ಕೆಪಿಎಸ್ ಮ್ಯಾಗ್ನೇಟ್ ಶಾಲೆ ಹೆಸರಿನಲ್ಲಿ ಹಳ್ಳಿ ಹಳ್ಳಿಯಲ್ಲಿನ ಕಿರಿಯ ಪ್ರಾಥಮಿಕ ಶಾಲೆ ಮುಚ್ಚಲು ಹೊರಟಿದೆ. ಇದರಿಂದ ಕನ್ನಡ ಭಾಷೆಗಷ್ಟೇ ಅಲ್ಲದೇ ಇಡೀ ಸಾಂಸ್ಕೃತಿಕ ಕ್ಷೇತ್ರಕ್ಕೆ ನಷ್ಟವಾಗಲಿದೆ. ಶಾಲೆಗಳು ತಾವಾಗಿಯೇ ನಿಂತರೆ ಆತ್ಮಹತ್ಯೆ, ಸರ್ಕಾರವೇ ಮುಚ್ವದರೆ ಹತ್ಯೆ ಮಾಡಿದಂತೆ. ಹಾಗಾಗಿ ಶಿಕ್ಷಣದಲ್ಲಿ ಕನ್ನಡ ಉಳಿಸುವ ಕೆಲಸ ಆಗಬೇಕು. ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.

ವಯೋಮಿತಿ ಸಡಿಲಿಕೆ ಮಾಡಬೇಕು: ಕನ್ನಡ ಕಲಿಯದೇ ಶಿಕ್ಷಣ ಮುಗಿಸಬಾರದು, ಕನ್ನಡ ಕಲಿಯದೇ ಉದ್ಯೋಗ ಸಿಗಬಾರದು, ಕನ್ನಡ ಬಳಸದೇ ಆಡಳಿತ ನಡೆಸಬಾರದು. ಇಂತಹ ಸನ್ನಿವೇಶವನ್ನು ಸರ್ಕಾರ ಸೃಷ್ಟಿ ಮಾಡುತ್ತಿಲ್ಲ. ಇತ್ತೀಚೆಗೆ ಸರ್ಕಾರ ಪ್ರಾಥಮಿಕ ಪ್ರೌಢಶಾಲೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿತ್ತು. 6ರಿಂದ 8ನೇ ತರಗತಿಗೆ ಪಾಠ ಮಾಡಲು ಕನ್ನಡ ಪದವೀಧರ ಶಿಕ್ಷಕರು ಅಗತ್ಯ. ಆದರೆ, ಒಬ್ಬನೇ ಒಬ್ಬ ಕನ್ನಡ ಪದವೀಧರ ಶಿಕ್ಷಕ ಹುದ್ದೆ ಸೃಷ್ಟಿ ಮಾಡಿರಲಿಲ್ಲ. ಆಂಧ್ರ, ತೆಲಂಗಾಣ ಮತ್ತು ತಮಿಳುನಾಡು ಸರ್ಕಾರ ಅಲ್ಲಿನ ಕನ್ನಡ ಶಾಲೆಗಳಲ್ಲಿ ಕನ್ನಡ ಭೋದಿಸಲು ಕನ್ನಡ ಪದವೀಧರರು ಬೇಕು ಎಂದು ಪ್ರಕಟಣೆ ಹೊರಡಿಸಿದೆ. ಆದರೆ, ನಮ್ಮ ಸರ್ಕಾರ ಕನ್ನಡ ಪದವೀಧರ ಶಿಕ್ಷಕ ಹುದ್ದೆಯನ್ನೇ ಸೃಷ್ಟಿಸಿಲ್ಲ. ಇಂತಹ ಸರ್ಕಾರವನ್ನು ಕರ್ನಾಟಕ ಸರ್ಕಾರ ಎಂದು ಕರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಪೆÇ್ರ.ಬಸವರಾಜ ಸಾದರ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪೆÇ್ರ. ನಂಜಯ್ಯ ಹೊಂಗನೂರು, ಪ್ರತಿಷ್ಠಾನದ ಗೌರವಾಧ್ಯಕ್ಷ ರೇವಣ ಸಿದ್ದಪ್ಪ, ಅಧ್ಯಕ್ಷ ಡಾ.ಕೆ. ತಿಮ್ಮಯ್ಯ, ಪೆÇ್ರ.ಸಿ.ಪಿ. ಸಿದ್ಧಾಶ್ರಮ ಇದ್ದರು.