
ವಿಜಯಪುರ, ಆ. 17:
ರಾಜ್ಯದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆ.19ರಂದು ಬುಧವಾರ ಬೆಳಗ್ಗೆ 10.30ಕ್ಕೆ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೆ.ಎಸ್. ಸುಧೀರಕುಮಾರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ತಿಳಿಸಿದ್ದಾರೆ.
ನ್ಯಾಯಮೂರ್ತಿ ಬೃಜೇಶ್ ಕುಮಾರ್ ನೇತೃತ್ವದ ಎರಡನೇ ನ್ಯಾಯಾಧಿಕರಣದ ತೀರ್ಪಿನಂತೆ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು 519.60 ಮೀಟರ್ನಿಂದ 524.256 ಮೀಟರ್ಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಮೂರನೇ ಹಂತದ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಬೇಕು. ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕು ಎಂದು ರೈತ ಸಂಘ ಆಗ್ರಹಿಸಿದೆ.
ರಾಜ್ಯದ ರೈತರು ತಮ್ಮ ಜಮೀನುಗಳಿಗೆ ತೆರಳಲು ದಾರಿ ಇಲ್ಲದೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಈ ಸಮಸ್ಯೆ ಪರಿಹರಿಸಲು ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಮಾರ್ಪಡಿಸಿ, ಕಾನೂನು ತಿದ್ದುಪಡಿ ಮಾಡುವ ಮೂಲಕ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಸುಗ್ರೀವಾಜ್ಞೆ ಹೊರಡಿಸಬೇಕು. ರಾಜ್ಯದ ಎಲ್ಲ ತಹಶೀಲ್ದಾರರಿಗೆ ದಾರಿ ಬಿಡಿಸುವ ಸಂಪೂರ್ಣ ಅಧಿಕಾರ ನೀಡಬೇಕು ಎಂದು ಸಂಘ ಒತ್ತಾಯಿಸಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬರ ಪರಿಸ್ಥಿತಿ ಮುಂದುವರಿದಿದ್ದು, ಇಡೀ ಜಿಲ್ಲೆ ಬಯಲುಸೀಮೆಯಾಗಿರುವುದರಿಂದ ನೀರಾವರಿಯಿಂದ ವಂಚಿತವಾಗಿದೆ. ಆದ್ದರಿಂದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಶೀಘ್ರ ಆರಂಭಿಸಿ ಪೂರ್ಣಗೊಳಿಸಬೇಕು. ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವ ರೂ.5,300 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ರಾಜ್ಯವನ್ನು ಬರಪೀಡಿತವೆಂದು ಘೋಷಿಸಿ ಸೂಕ್ತ ಪರಿಹಾರ ನೀಡಬೇಕು. ಕೃಷಿಗಾಗಿ ರಾಷ್ಟ್ರೀಕೃತ ಬ್ಯಾಂಕ್ಗಳು ಹಾಗೂ ವಿವಿಧ ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ರೈತ ಸಂಘ ಒತ್ತಾಯಿಸಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕು ವ್ಯಾಪ್ತಿಯ ಬಾಜೀರಾಯನ ಹಳ್ಳಕ್ಕೆ ಧರ್ಮಾ ನದಿ ಜೋಡಣೆ ಮಾಡಿ, ಮನ್ನಂಗಿ ಕುಣಿಮೆಳಿ ಗ್ರಾಮದ ಮಧ್ಯದಲ್ಲಿ ಧರ್ಮಾ-ಬಾಜೀರಾಯನ ಜಲಾಶಯ ನಿರ್ಮಿಸಬೇಕು. ಮಹಾದಾಯಿ ನದಿಯನ್ನು ಕಳಸಾ-ಬಂಡೂರಿ ಹಳ್ಳಗಳ ಮೂಲಕ ಜೋಡಿಸಿ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಕುಡಿಯುವ ನೀರಿನ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹ
ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಧರಣಿ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯ ಕಾರ್ಯಕರ್ತರು ಹಾಗೂ ರೈತ ಬಾಂಧವರು ಭಾಗವಹಿಸಬೇಕು ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಎಸ್. ಸುಧೀರಕುಮಾರ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮನವಿ ಮಾಡಿದ್ದಾರೆ.
ವಿಜಯಪುರದಿಂದ ಆ.18ರಂದು ಮಂಗಳವಾರ ಮಧ್ಯಾಹ್ನ 12.30ಕ್ಕೆ ಯಶವಂತಪುರಕ್ಕೆ ರೈಲಿನ ಮೂಲಕ ತೆರಳಲಾಗುವುದು ಎಂದು ತಿಳಿಸಿದ್ದಾರೆ.






























