
ಕಲಬುರಗಿ: `ಬ್ರಾಹ್ಮಣರು ತಮ್ಮೊಳಗಿನ ಒಳಪಂಗಡಗಳ ಭಿನ್ನಾಭಿಪ್ರಾಯ, ಮತಭೇದಗಳನ್ನು ಮರೆತು ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಪರಸ್ಪರ ಗೌರವ ಮತ್ತು ಸಹಕಾರದ ಮೂಲಕ ಸಮಾಜದ ಏಕತೆ ಹಾಗೂ ಬಲ ಹೆಚ್ಚಿಸಬೇಕು’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್ ಕರೆ ನೀಡಿದರು.
ನಗರದ ಮರಾಠಿ ಸಾಹಿತ್ಯ ಮಂಡಳ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರವೀರ ಸ್ವಾಮಿ ರಮಾನಂದತೀರ್ಥರ ಕುರಿತ ಪುಸ್ತಕ ಬಿಡುಗಡೆ ಹಾಗೂ ಮಾಸ್ಟರ್ ಹಿರಣ್ಣಯ್ಯ ಜೀವನ ಗೌರವ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಾಹ್ಮಣ ಸಮಾಜದ ಏಳಿಗೆಗೆ ಸಂಘಟನೆ ಮತ್ತು ಒಗ್ಗಟ್ಟು ಅತ್ಯವಶ್ಯವಾಗಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಹಾಗೂ ಒಳಪಂಗಡಗಳ ವಿಚಾರಗಳನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಒಡಕು ಮೂಡಿಸಿಕೊಳ್ಳಬಾರದು. ಎಲ್ಲರೂ ಒಂದೇ ಸಮಾಜದ ಸದಸ್ಯರು ಎಂಬ ಭಾವನೆಯೊಂದಿಗೆ ಪರಸ್ಪರ ಗೌರವದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಮಹಾನ್ ಯತಿಗಳು, ಸಂತರ ಹಾಗೂ ಧಾರ್ಮಿಕ ಮುಖಂಡರ ಬಗ್ಗೆ ಅಪಾರ ಗೌರವ ಹೊಂದಿರಬೇಕು. ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು ಹಾಗೂ ಶ್ರೀ ಮಧ್ವಾಚಾರ್ಯರ ಸಾಧನೆ, ತ್ಯಾಗ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಅರಿತುಕೊಳ್ಳದೆ ನಿಂದಿಸುವ ಅಥವಾ ಅವಹೇಳನ ಮಾಡುವ ಪ್ರವೃತ್ತಿಯನ್ನು ಯಾರೂ ಬೆಳೆಸಿಕೊಳ್ಳಬಾರದು. ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಸೌಹಾರ್ದಯುತವಾಗಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು, ಈ ದಿಸೆಯಲ್ಲಿ ಎಲ್ಲ ಮಠಾಧೀಶರನ್ನೂ ಭೇಟಿಯಾಗಿ ತಮ್ಮ ಶಿಷ್ಯರು, ಭಕ್ತರಿಗೆ ಸೂಚನೆ ಕೊಡಿಸಲು ಉದ್ದೇಶಿಸಿರುವುದಾಗಿ ತಿಳಿಸಿದರು.
ಸಮಾಜದ ವಿದ್ಯಾರ್ಥಿ, ಯುವಜನರಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಹಾಗೂ ಅವಕಾಶಗಳನ್ನು ಕಲ್ಪಿಸುವುದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು ನೀಡುವುದು ಮತ್ತು ಸಾಮಾಜಿಕ ಸೇವಾ ಕಾರ್ಯಗಳನ್ನು ಮತ್ತಷ್ಟು ಬಲಪಡಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.
ಬ್ರಾಹ್ಮಣರ ಕೊಡುಗೆ ಅಪಾರ
ಭಾರತದ ಸ್ವಾತಂತ್ರ?? ಸಂಗ್ರಾಮದಲ್ಲಿ ಬ್ರಾಹ್ಮಣರ ಪಾತ್ರ ಮಹತ್ತರವಾಗಿದೆ. ಆ ಕಾಲದಲ್ಲೇ ಬ್ರಾಹ್ಮಣ ಸಮಾಜದ ಸಾವಿರಾರು ಯುವಜನರು ತ್ಯಾಗ, ಬಲಿದಾನಗೈದಿದ್ದಾರೆ. ಈಗಲೂ ದೇಶದ ಅಭಿವೃದ್ಧಿಗೆ ಬ್ರಾಹ್ಮಣರ ಕೊಡುಗೆ ಅಪಾರವಾಗಿದೆ. ಆದರೂ ರಾಜಕೀಯ ಕಾರಣಗಳಿಗಾಗಿ ಸಮಾಜವನ್ನು ಕಡೆಗಣಿಸುವ, ಅನ್ಯಾಯವೆಸಗುವ ಪ್ರವೃತ್ತಿ ಬೇರೂರಿದೆ. ಆದ್ದರಿಂದ ಬ್ರಾಹ್ಮಣರು ಎಚ್ಚೆತ್ತುಕೊಂಡು ಒಗ್ಗಟ್ಟಾಗಬೇಕಿದೆ ಎಂದರು.
ಎನ್.ವಿ. ಪದವಿ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ ಪೆÇ್ರ. ಸುನಂದಾ ಕುಲಕರ್ಣಿ ರಚಿಸಿರುವ `ರಾಷ್ಟ್ರವೀರ ಸ್ವಾಮಿ ರಮಾನಂದತೀರ್ಥ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.
100 ಕೋಟಿ ರೂ. ದತ್ತಿನಿಧಿ ಸ್ಥಾಪನೆ
ಬ್ರಾಹ್ಮಣ ಸಮಾಜದ ಬಡವರು, ಆರ್ಥಿಕ ದುರ್ಬಲರಿಗೆ ನೆರವು ನೀಡುವುದಕ್ಕಾಗಿ ಅ.ಕ. ಬ್ರಾಹ್ಮಣ ಮಹಾಸಭಾ 100 ಕೋಟಿ ರೂ.ಗಳ ನಿಧಿ ಸ್ಥಾಪಿಸಲು ಉದ್ದೇಶಿಸಿದೆ. ರಾಜ್ಯದಾದ್ಯಂತ 10 ಸಾವಿರ ಜನರಿಂದ ತಲಾ ಒಂದು ಲಕ್ಷ ರೂ. ಸಂಗ್ರಹಿಸುವ ಹೆಗ್ಗುರಿ ಹೊಂದಲಾಗಿದೆ. ಈಗಾಗಲೇ 82 ಲಕ್ಷ ರೂ. ಸಂಗ್ರಹಿಸಲಾಗಿದೆ ಎಂದು ಮಹಾಸಭಾ ಅಧ್ಯಕ್ಷ ಎಸ್. ರಘುನಾಥ ಹೇಳಿದರು.
ಮಹಾಸಭಾ ಕಲಬುರಗಿ ಜಿಲ್ಲಾ ಪ್ರತಿನಿಧಿ ಪ್ರಮೋದ ದೇಶಪಾಂಡೆ ಆಡಕಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ-ಕಾಲೇಜು ಪಠ್ಯಕ್ರಮದಲ್ಲಿ ಸ್ವಾಮಿ ರಮಾನಂದತೀರ್ಥರ ಜೀವನ, ಕೊಡುಗೆಗಳ ವಿಷಯ ಸೇರಿಸುವುದು ಅವಶ್ಯವಾಗಿದ್ದು, ಈ ದಿಸೆಯಲ್ಲಿ ಎಲ್ಲರೂ ಪ್ರಯತ್ನಿಸಬೇಕಿದೆ ಎಂದರು.
ಮಹಾಸಭಾ ಉಪಾಧ್ಯಕ್ಷ ರಾಮ್ ಗೋವಿಂದರಾವ್ ರಾಜಶೇಖರ್, ಉತ್ತರಾದಿ ಮಠದ ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ, ಶಂಕರ ಮಠದ ವಿಶೇಷ ಪ್ರತಿನಿಧಿ ಪ್ರಕಾಶ ಎಚ್. ಕುಲಕರ್ಣಿ ವಕೀಲರು, ಉದ್ಯಮಿ ಕೃಷ್ಣಾಜಿ ಕುಲಕರ್ಣಿ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಶೋಭಾ ಗುರುರಾಜ ದೇಸಾಯಿ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಪಾಂಡುರಂಗ ದೇಶಮುಖ, ದತ್ತಾತ್ರೇಯ ಪೂಜಾರಿ ಗಾಣಗಾಪುರ, ಪಿ.ವಿ. ಜೋಶಿ, ಮಹಾಸಭಾ ವಲಯ ಸಂಘಟನಾ ಕಾರ್ಯದರ್ಶಿ ಮೋಹನ ಓಂಕಾರ್, ಬೀದರ್ ಜಿಲ್ಲಾ ಪ್ರತಿನಿಧಿ ವೆಂಕಟೇಶ ಕುಲಕರ್ಣಿ ಮತ್ತಿತರರು ವೇದಿಕೆಯ ಮೇಲಿದ್ದರು. ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಲೀಲಾವತಿ ದೇಶಪಾಂಡೆ ನಿರೂಪಿಸಿದರು. ಗುರುರಾಜ ಕುಲಕರ್ಣಿ ವಂದಿಸಿದರು.
ಕುಡಾ ಮಾಜಿ ಅಧ್ಯಕ್ಷ ದಯಾಘನ ಧಾರವಾಡಕರ್, ಬಿಜೆಪಿ ಮುಖಂಡ ಪ್ರಹ್ಲಾದ ಪೂಜಾರಿ ಗಾಣಗಾಪುರ, ಮುರಳೀಧರ ಜಿ. ಕರಲಗಿಕರ್ ಸೇರಿದಂತೆ ಹಲವಾರು ಗಣ್ಯರು, ಮಹಿಳಾ ಭಜನಾ ಮಂಡಳಿ ಸದಸ್ಯೆಯರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ಪ್ರಶಸ್ತಿ ಪ್ರದಾನ
ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿದ ಹಿರಿಯರಾದ ಪಾಂಡುರಂಗರಾವ ಕಂಪ್ಲಿ, ಶ್ಯಾಮಾಚಾರ್ಯ ಬೈಚಬಾಳ, ವಿದ್ಯಾಸಾಗರ ಪಾಟೀಲ್, ನೃತ್ಯ ಸಾಧಕಿ ಡಾ. ಶುಭಾಂಗಿ ಸುಧೀಂದ್ರ ಆಚಾರ್ ಅವರಿಗೆ ಮಾಸ್ಟರ್ ಹಿರಣ್ಣಯ್ಯ ಜೀವನ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.






























