
ಪಾಟ್ನಾ, ಬಿಹಾರ, ಆ. ೧೭- ಬಿಹಾರದ ಲಖಿಸರಾಯಿ ಜಿಲ್ಲೆಯ ಪ್ರಸಿದ್ಧ ಇಂದ್ರ ಮುನೇಶ್ವರ ಮಹಾದೇವ ದೇವಾಲಯದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಭಕ್ತರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಪಶ್ಚಿಮ ಬಂಗಾಳದ ಪುಣ್ಯ ಕ್ಷೇತ್ರ ಬಿರ್ರ್‍ಉಮ್ ಜಿಲ್ಲೆಯ ತಾರಾ ಪೀಠದಲ್ಲಿ ಎಇ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಏಳು ಮಂದಿಯಾತ್ರಿಕರು ದುರ್ಮರಣಕ್ಕೀಡಾಗಿದ್ದಾರೆ.
ಬಿಹಾರದ ಲಖಿಸರಾಯ್ ಜಿಲ್ಲೆಯ ಪ್ರಸಿದ್ಧ ಶ್ರೀ ಇಂದ್ರ ಮನೇಶ್ವರ ಮಹಾದೇವ ದೇವಾಲಯದ ಆವರಣದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಏಳು ಮಹಿಳಾ ಭಕ್ತರು ಮೃತಪಟ್ಟಿದ್ದು, ೧೨ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.ಹಲವರ ಸ್ಥಿತಿ ಗಂಭೀರವಾಗಿದೆ.
ಶ್ರಾವಣ ಮಾಸದ ಮೂರನೇ ಸೋಮವಾರವಾದ್ದರಿಂದ ಇಂದ್ರ ಮನೇಶ್ವರ ಮಹಾದೇವನ ದರ್ಶನ ಮತ್ತು ಜಲಾಭಿಷೇಕಕ್ಕಾಗಿ ರಾತ್ರಿಯಿಂದಲೇ ಸುಮಾರು ೫೦,೦೦೦ಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಹರಿದುಬಂದಿದ್ದರು. ಸುಮಾರು ೬ ಕಿಲೋಮೀಟರ್ ಉದ್ದದ ಸಾಲು ನಿರ್ಮಾಣವಾಗಿದ್ದು, ಭಕ್ತರು ಗಂಟೆಗಟ್ಟಲೆ ಕಾಯುತ್ತಿದ್ದರು. ಬೆಳಿಗ್ಗೆ ೬:೩೦ ರಿಂದ ೬:೪೫ ರ ವೇಳೆಗೆ ದೇವಸ್ಥಾನದ ಸಮೀಪದ ಅಶೋಕ್ ಧಾಮ್ ಹಾಲ್ಟ್ ರೈಲ್ವೆ ನಿಲ್ದಾಣದಲ್ಲಿ ಎರಡೂ ದಿಕ್ಕುಗಳಿಂದ ಏಕಕಾಲಕ್ಕೆ ಎರಡು ಸ್ಥಳೀಯ ರೈಲುಗಳು ಬಂದು ತಲುಪಿದವು. ಇದರಿಂದಾಗಿ ಹಠಾತ್ತನೆ ಸಾವಿರಾರು ಹೊಸ ಭಕ್ತರು ದೇವಾಲಯದತ್ತ ನುಗ್ಗಿದ್ದರಿಂದ ಜನಸಂದಣಿಯ ಒತ್ತಡ ವಿಪರೀತವಾಯಿತು.
ಇದೇ ಸಮಯದಲ್ಲಿ ದೇವಾಲಯದ ಪ್ರವೇಶದ್ವಾರದ ಬಳಿ ಇದ್ದ ಬ್ಯಾರಿಕೇಡ್‌ಗಳ ಮೇಲೆ ಭಕ್ತರ ಭಾರ ಹೆಚ್ಚಾಗಿ ಬ್ಯಾರಿಕೇಡ್ ಕುಸಿದು ಬಿದ್ದಿದೆ. ಪ್ರವೇಶದ್ವಾರದಲ್ಲಿದ್ದ ಕಿರಿದಾದ ಸಾಲಿನಲ್ಲಿ ಕೆಲ ಯುವಕರು ನುಗ್ಗಲು ಯತ್ನಿಸಿದಾಗ ಗೊಂದಲ ಉಂಟಾಗಿ ಸಾಲಿನಲ್ಲಿ ನಿಂತಿದ್ದ ಮಹಿಳೆಯರು ಒಬ್ಬರ ಮೇಲೊಬ್ಬರು ಬಿದ್ದರು. ಅದೇ ವೇಳೆ ಆವರಣದಲ್ಲಿದ್ದ ವಿದ್ಯುತ್ ಕಂಬವೊಂದು ಬಿದ್ದಾಗ, “ಕರೆಂಟ್ ಹರಿಯುತ್ತಿದೆ” ಎಂಬ ವದಂತಿ ಭಕ್ತರಲ್ಲಿ ಕಿಚ್ಚಿನಂತೆ ಹರಡಿತು. ಈ ಭೀತಿಯಿಂದ ಜನರು ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದ್ದರಿಂದ ಕಾಲ್ತುಳಿತದ ಭೀಕರತೆ ಹೆಚ್ಚಾಯಿತು.
ಘಟನೆಯ ನಂತರ ವಿದ್ಯುತ್ ಆಘಾತದಿಂದ ಸಾವು ಸಂಭವಿಸಿದೆ ಎಂಬ ವದಂತಿಗಳನ್ನು ಲಖಿಸರಾಯ್ ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ್ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಆ ಸಮಯದಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿತ್ತು ಮತ್ತು ಪ್ರಮುಖ ಸಾವುಗಳಿಗೆ ವಿದ್ಯುತ್ ಸ್ಪರ್ಶವಲ್ಲ, ಬದಲಾಗಿ ಕಾಲ್ತುಳಿತದಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಯಿತು ಎಂದು ಜಿಲ್ಲಾಡಳಿತ ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ಘಟನಾ ಸ್ಥಳಕ್ಕೆ ಲಖಿಸರಾಯ್ ಜಿಲ್ಲಾಡಳಿತ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಲಖಿಸರಾಯ್ ಸೌದರ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಭದ್ರತಾ ಲೋಪ ಮತ್ತು ಜನಸಂದಣಿ ನಿರ್ವಹಣೆಯ ವೈಫಲ್ಯದ ಕುರಿತು ತನಿಖೆ ಮುಂದುವರಿದಿದೆ. ಬಿಹಾರದ ಮುಖ್ಯಮಂತ್ರಿ ಸಮ್ರಾಟ್ ಚೌಧರಿ ಈ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ನೆರವು ಹಾಗೂ ಗಾಯಾಳುಗಳಿಗೆ ಉಚಿತ ಅತ್ಯುತ್ತಮ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ.
ಏಳು ಮಂದಿ ಯಾತ್ರಿಕರು ಸಾವು :
ಪಶ್ಚಿಮ ಬಂಗಾಳದ ಬೀರ್ ಭೂಮ್ನ ಹೋಟೆಲೊಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರಿ ಆಗ್ನಿ ಅವಘಡದಲ್ಲಿ ಕನಿಷ್ಠ ಏಳು ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯಾತ್ರಾ ಸ್ಥಳವಾದ ತಾರಾಪೀಠ ದೇವಾಲಯದ ಸಮೀಪ ನಾಲ್ಕು ಅಂತಸ್ತಿನ ಹೋಟೆಲ್‌ನ ನೆಲ ಮಹಡಿಯಲ್ಲಿ ಮುಂಜಾನೆ ಸುಮಾರು ೪:೩೦ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಈ ಸಮಯದಲ್ಲಿ ಬಹುತೇಕ ಯಾತ್ರಿಕರು ನಿದ್ರಿಸುತ್ತಿದ್ದರು.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ರಾಂಪುರಹತ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.ಸುದ್ದಿ ತಿಳಿದ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದರು.
ಘಟನೆಗೆ ನಿಖರ ಕಾರಣ ಏನೆಂಬುದು ತಕ್ಷಣ ತಿಳಿಯದಿದ್ದರೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.

































