
ಬೆಂಗಳೂರು,ಆ.೧೭-ಐದು ವರ್ಷದ ಮಗನ ಜೊತೆ ತಂದೆ ಶಂಕಾಸ್ಪದವಾಗಿ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಾಣವಾರದ ಗುಡ್ಡೆ ಬಸವಪುರದಲ್ಲಿ ನಡೆದಿದೆ.
ಗುಡ್ಡೆ ಬಸವಪುರದ ಅಭಿನಂದನ್ (೩೮) ಹಾಗೂ ಅವರ ಮಗ ಯದುವೀರ್ (೫) ಮೃತ ದುರ್ದೈವಿಗಳು.ಮೇಲ್ನೋಟಕ್ಕೆ ಇಬ್ಬರ ಸಾವಿನ ಹಿಂದೆಯೂ ಕೊಲೆ ಶಂಕೆ ವ್ಯಕ್ತವಾಗಿದೆ.
ಅಭಿಂದನ್ ಹಾಗೂ ಹರಿಣಿ ಅವರಿಗೆ ೬ ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೆ ೫ ವರ್ಷದ ಯದುವೀರ್ ಎಂಬ ಮಗನಿದ್ದನು. ಮೂವರೂ ಗುಡ್ಡೆ ಬಸವಪುರದ ಮನೆಯಲ್ಲಿ ವಾಸವಾಗಿದ್ದರು. ಎಂದಿನಂತೆ ನಿನ್ನೆ ರಾತ್ರಿ ಮನೆಗೆ ಬಂದಿದ್ದ ಅಭಿನಂದನ್ ಮಗನೊಂದಿಗೆ ಮಲಗಿದ್ದರು. ಆದರೆ, ಇಂದು ಮುಂಜಾನೆ ನೋಡಿದಾಗ ಅಭಿನಂದನ್ ಹಾಗೂ ಮಗು ಯದುವೀರ್ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಸಂಬಂಧಿಕರು ಭೇಟಿ ನೀಡಿದಾಗ ಹಲವು ಆಘಾತಕಾರಿ ಹಾಗೂ ಅನುಮಾನಾಸ್ಪದ ಅಂಶಗಳು ಬೆಳಕಿಗೆ ಬಂದಿದೆ.
ಅಭಿನಂದನ್ ಅವರ ಕಿವಿಯಿಂದ ರಕ್ತ ಒಸರುತ್ತಿತ್ತು ಹಾಗೂ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಮಗುವಿನ ಸಾವು ಕೂಡ ಅನುಮಾನಾಸ್ಪದವಾಗಿದೆ.
ಪತ್ನಿಯ ಅಸಂಬದ್ಧ ಹೇಳಿಕೆ:
ಪತಿ ಹಾಗೂ ಮಗ ಪಕ್ಕದ ಕೋಣೆಯಲ್ಲಿ ಹೆಣವಾಗಿ ಬಿದ್ದಿದ್ದರೂ, ಪತ್ನಿ ಹರಿಣಿ ಮಾತ್ರ ಇನ್ನೊಂದು ರೂಮ್ನಲ್ಲಿದ್ದಳು. ಕಿವಿಯಲ್ಲಿ ರಕ್ತ ಬಂದಿದ್ದರ ಬಗ್ಗೆ ಕೇಳಿದರೆ, ’ರಾತ್ರಿಯೇ ರಕ್ತ ಬರುತ್ತಿತ್ತು, ಅದಕ್ಕೆ ಅರಿಶಿನ ಹಚ್ಚಿದ್ದೆ’ ಎಂದು ಹಾರಿಕೆಯ ಹಾಗೂ ಬೇಜವಾಬ್ದಾರಿಯುತ ಉತ್ತರ ನೀಡಿದ್ದಾಳೆ. ಓಡಿಹೋಗಿದ್ದ ಪತ್ನಿ:
ಹರಿಣಿ ಈ ಹಿಂದೆ ಕುಟುಂಬಸ್ಥರಿಗೆ ತಿಳಿಸದೆ ಮನೆಯಿಂದ ಓಡಿಹೋಗಿ ಬರೋಬ್ಬರಿ ೩ ತಿಂಗಳು ಬೇರೆಡೆ ವಾಸವಿದ್ದಳು ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ತಂದೆ-ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಾಣಾವರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

































