
ತೆಹ್ರಾನ್, ಆ.೧೬: ಇರಾನ್ ಮತ್ತು ಒಮಾನ್ ದೇಶಗಳು ಪ್ರಮುಖ ಹೊರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಗೆ ಸುರಕ್ಷಿತ ಮಾರ್ಗ ಕಲ್ಪಿಸುವ ಕುರಿತು ಒಪ್ಪಂದಕ್ಕೆ ಬಂದಿವೆ.
ಅಮೆರಿಕದ ಜತೆ ಇರಾನ್‌ನ ಸಂಘರ್ಷ ಮುಂದುವರಿದಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರ್ಮುಜ್ ಜಲಸಂಧಿಯನ್ನು ಅಮೆರಿಕದ ಭೂಭಾಗವೆಂದು ಘೋಷಿಸುವುದಾಗಿ ಹೇಳಿದ ಬಳಿಕ ಈ ಒಪ್ಪಂದದ ಬೆಳವಣಿಗೆ ನಡೆದಿದೆ.
ಇತರ ಹಲವು ವಿಷಯಗಳ ಕುರಿತು ಒಮಾನ್ ಜತೆ ಮಾತುಕತೆಗಳು ಇನ್ನೂ ಮುಂದುವರಿದಿವೆ. ಆದರೆ, ಹಡಗುಗಳ ಸುರಕ್ಷಿತ ಸಂಚಾರಕ್ಕೆ ಸಂಬಂಧಿಸಿದ ವ್ಯವಸ್ಥೆ ಪ್ರತ್ಯೇಕವಾಗಿದ್ದು, ಈ ಕುರಿತು ಒಪ್ಪಂದವಾಗಿದೆ ಎಂದು ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ, ಅಮೆರಿಕ ವಿಧಿಸಿರುವ ನಿರ್ಬಂಧಗಳು ಮತ್ತು ನೌಕಾ ನಿರ್ಬಂಧದಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ಸಂಪೂರ್ಣ ಭದ್ರತೆಯನ್ನು ಪುನಃಸ್ಥಾಪಿಸುವುದು ಸಾಧ್ಯವಿಲ್ಲ ಎಂದು ಬಘಾಯಿ ಹೇಳಿದ್ದಾರೆ.
ಹೋರ್ಮುಜ್ ಜಲಸಂಧಿಯನ್ನು “ಅಮೆರಿಕದ ಪ್ರದೇಶ”ವೆಂದು ಘೋಷಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿರುವ ಸಂದರ್ಭದಲ್ಲೇ ಬಘಾಯಿ ಅವರ ಹೇಳಿಕೆ ಹೊರಬಿದ್ದಿದೆ. ಶುಕ್ರವಾರ ನ್ಯೂಯಾರ್ಕ್‌ನಲ್ಲಿ ನಡೆದ ರಾಜಕೀಯ ರ್‍ಯಾಲಿಯಲ್ಲಿ ಮಾತನಾಡಿದ ೮೦ ವರ್ಷದ ರಿಪಬ್ಲಿಕನ್ ನಾಯಕ, ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಟ್ರಂಪ್, “ಇರಾನ್ ಅನ್ನು ಸೋಲಿಸಿದ ಬಳಿಕ, ಶೀಘ್ರದಲ್ಲೇ ಹೊರ್ಮುಜ್ ಜಲಸಂಧಿಯನ್ನು ಅಮೆರಿಕದ ಪ್ರದೇಶವೆಂದು ಘೋಷಿಸುತ್ತೇನೆ” ಎಂದು ಹೇಳಿದ್ದರು. ಆದರೆ, ಅನಾಮಧೇಯ ಶ್ವೇತಭವನದ ಅಧಿಕಾರಿಯೊಬ್ಬರು ಟ್ರಂಪ್ ಅವರು ಈ ಹೇಳಿಕೆಯನ್ನು ತಮಾಷೆಯಾಗಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇರಾನ್ ತಿರುಗೇಟು: ಟ್ರಂಪ್ ಅವರ ಹೇಳಿಕೆಗೆ ಇರಾನ್ ಕೂಡ ತಕ್ಷಣ ಪ್ರತಿಕ್ರಿಯಿಸಿದ್ದು, ಹೊರ್ಮುಜ್ ಜಲಸಂಧಿ ಇರಾನ್‌ನ ನಿಯಂತ್ರಣದಲ್ಲೇ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.
ಇರಾನ್‌ನ ಉಪ ವಿದೇಶಾಂಗ ಸಚಿವ ಕಾಜೆಮ್ ಘರೀಬಾಬಾದಿ ಅವರು ಎಕ್ಸ್ ನಲ್ಲಿ, “ಹೊರ್ಮುಜ್ ಜಲಸಂಧಿ ಇರಾನ್‌ಗೆ ಸೇರಿದ್ದು, ಇರಾನ್‌ನದ್ದೇ ಆಗಿದೆ ಮತ್ತು ಮುಂದೆಯೂ ಇರಾನ್‌ನದ್ದೇ ಆಗಿರಲಿದೆ” ಎಂದು ಹೇಳಿದ್ದಾರೆ. ಜಲಸಂಧಿಯನ್ನು ಯಾವಾಗ ಮುಚ್ಚಬೇಕು ಅಥವಾ ತೆರೆಯಬೇಕು ಎಂಬ ನಿರ್ಧಾರ ಇರಾನ್‌ನ ನಿಯಂತ್ರಣದಲ್ಲೇ ಇರಲಿದೆ ಎಂದೂ ಅವರು ತಿಳಿಸಿದ್ದಾರೆ.
ವಿಶ್ವದ ಒಟ್ಟು ಕಚ್ಚಾ ತೈಲ ಸಾಗಣೆಯ ಸುಮಾರು ಐದನೇ ಒಂದು ಭಾಗ ಹೊರ್ಮುಜ್ ಜಲಸಂಧಿಯ ಮೂಲಕ ಸಾಗುತ್ತದೆ. ಹೀಗಾಗಿ ಈ ಜಲಮಾರ್ಗ ಇರಾನ್ ಮತ್ತು ಅಮೆರಿಕ ನಡುವಿನ ಪ್ರಮುಖ ವಿವಾದದ ಕೇಂದ್ರಬಿಂದುವಾಗಿದೆ.

































