Home ಜಿಲ್ಲೆ ಶಿವಮೊಗ್ಗ ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿ ಮುಚ್ಚಿದ ನಾಗರೀಕ

ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿ ಮುಚ್ಚಿದ ನಾಗರೀಕ

ಶಿವಮೊಗ್ಗ, ಆ.೧೦-ಕಳೆದ ಹಲವು ವರ್ಷಗಳಿಂದ ಮುಖ್ಯ ರಸ್ತೆಯಲ್ಲಿ ಬಿದ್ದಿದ್ದ ಗುಂಡಿ-ಗೊಟರು ಮುಚ್ಚುವಲ್ಲಿ ವಿಫಲವಾದ ಆಡಳಿತದ ನಿರ್ಲಕ್ಷ್ಯದ ವಿರುದ್ದ, ಸ್ವಂತ ಹಣದಲ್ಲಿಯೇ ನಿವಾಸಿಯೋರ್ವರು ರಸ್ತೆಯ ಗುಂಡಿ-ಗೊಟರು ಮುಚ್ಚಲು ಮುಂದಾಗಿರುವ ಘಟನೆ, ಶಿವಮೊಗ್ಗ ನಗರದ ಹೊರವಲಯ ಶ್ರೀ ಬಡಾವಣೆಯಲ್ಲಿ ನಡೆದಿದೆ.


ಸದರಿ ಬಡಾವಣೆ ನಿವಾಸಿಯಾದ, ಸದಾ ಸಮಾಜಮುಖಿ ಕೆಲಸಗಳ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿರುವ ಕೃಷ್ಣಪ್ಪ ಎಂಬುವರೇ ಸಾವಿರಾರು ರೂ. ವೆಚ್ಚದಲ್ಲಿ ರಸ್ತೆಯ ಗುಂಡಿ ಗೊಟರು ಮುಚ್ಚಲು ಮುಂದಾಗಿರುವ ವ್ಯಕ್ತಿಯಾಗಿದ್ದಾರೆ.


ಅವ್ಯವಸ್ಥೆ : ಕರ್ನಾಟಕ ಗೃಹ ಮಂಡಳಿ ಬಡಾವಣೆ, ಶ್ರೀ ಬಡಾವಣೆ, ಮಹಾಲಕ್ಷ್ಮೀ ಲೇಔಟ್ ನ ೬೦ ಅಡಿ ಅಗಲದ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆಯು ಕಳೆದ ಹಲವು ವರ್ಷಗಳಿಂದ ಭಾರೀ ದೊಡ್ಡ ಪ್ರಮಾಣದಲ್ಲಿ ಹಾಳಾಗಿದ್ದು, ಗುಂಡಿ ಗೊಟರು ಬಿದ್ದಿವೆ.


ನಿರಂತರ ಹೋರಾಟದ ಫಲವಾಗಿ ಕಳೆದೆರೆಡು ವರ್ಷಗಳ ಹಿಂದೆ ರಸ್ತೆಯ ಅರ್ಧ ಭಾಗ ಡಾಂಬರೀಕರಣಗೊಂಡಿದೆ. ಆದರೆ ಉಳಿದ ಭಾಗ ಇಲ್ಲಿಯವರೆಗೂ ಡಾಂಬರೀಕರಣಗೊಂಡಿಲ್ಲ. ಜನ ವಾಹನ ಸಂಚಾರಕ್ಕೆ ರಸ್ತೆಯು ಅಯೋಗ್ಯವಾಗಿ ಪರಿಣಮಿಸಿದೆ. ರಸ್ತೆಯಲ್ಲಿ ಗುಂಡಿಗಳಿವೆಯೋ, ಇಲ್ಲವೇ ಗುಂಡಿಗಳಲ್ಲಿ ರಸ್ತೆಯಿದೆಯೋ ಎಂಬ ದುಃಸ್ಥಿತಿಯಿದೆ.


ಸದರಿ ಬಡಾವಣೆಯು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಅಧೀನದಲ್ಲಿದೆ. ಕಳೆದ ಹಲವು ವರ್ಷಗಳಿಂದ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಪಂಚಾಯ್ತಿಗೆ ಮನವಿ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಅನುದಾನದ ಕೊರತೆಯ ನೆಪ ಹೇಳುತ್ತಾ ಡಾಂಬರೀಕರಣ ಮಾಡುವುದಿರಲಿ, ಇಲ್ಲಿಯವರೆಗೂ ಗುಂಡಿ ಗೊಟರು ಕೂಡ ಮುಚ್ಚಿಲ್ಲವೆಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಾರೆ.


ಈಗಾಗಲೇ ಶಾಸಕರಾದ ಶಾರದಾ ಪೂರ್ಯನಾಯ್ಕ್ ಅವರಿಗೂ ರಸ್ತೆ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿಲಾಗಿದೆ. ವಿಶೇಷ ಅನುದಾನದಡಿ ರಸ್ತೆ ಡಾಂಬರೀಕರಣಕ್ಕೆ ಕ್ರಮಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿಲ್ಲವೆಂದು ನಿವಾಸಿಗಳು ದೂರುತ್ತಾರೆ.


ಕ್ರಮ : ‘ಪ್ರಸ್ತುತ ಮಳೆಗಾಲದ ವೇಳೆ ರಸ್ತೆ ದುರವಸ್ಥೆ ಮತ್ತಷ್ಟು ಹೆಚ್ಚಾಗಿದೆ. ಜನ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಈ ಕಾರಣದಿಂದ ಸ್ವಂತ ಹಣದಲ್ಲಿಯೇ ರಸ್ತೆಯ ದೊಡ್ಡ ದೊಡ್ಡ ಗುಂಡಿ ಗೊಟರು ಮುಚ್ಚಲು ನಿರ್ಧರಿಸಿದ್ದೆನೆ. ಭಾನುವಾರದಿಂದ ಈ ಕಾರ್ಯಕ್ಕೆ ಚಾಲನೆ ನೀಡಿದ್ದೆನೆ’ ಎಂದು ಶ್ರೀ ಬಡಾವಣೆ ನಿವಾಸಿ ಕೃಷ್ಣಪ್ಪರವರು ತಿಳಿಸುತ್ತಾರೆ.


‘ಕೃಷ್ಣಪ್ಪರವರ ಸಮಾಜಮುಖಿ ಕಾರ್ಯವು ನಿಜಕ್ಕೂ ಅಭಿನಂದನೀಯವಾಗಿದೆ. ಸಾವಿರಾರು ರೂ. ವ್ಯಯಿಸಿ ಗುಂಡಿ ಗೊಟರು ಮುಚ್ಚಲು ಮುಂದಾಗಿದ್ದಾರೆ. ಇನ್ನಾದರೂ ಆಡಳಿತ ಎಚ್ಚೆತ್ತುಕೊಳ್ಳಬೇಕು. ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು’ ಎಂದು ಕೆಹೆಚ್ಬಿ ನಿವಾಸಿ ರಾಜು ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.


ಒಟ್ಟಾರೆ ಶ್ರೀ ಬಡಾವಣೆ ನಿವಾಸಿ ಕೃಷ್ಣಪ್ಪರವರ ‘ಗಾಂಧಿಗಿರಿ’ ಮಾದರಿಯ ಕಾರ್ಯವು ಎಲ್ಲರ ಗಮನ ಸೆಳೆದಿದೆ. ಇನ್ನಾದರೂ ಆಡಳಿತ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸುತ್ತಾರೆ.