
ಜಮಖಂಡಿ, ಜು. 12: ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋಧನ, ಸ್ವ-ಆಧಾರಿತ ಜೀವನ ಹಾಗೂ ನಾಗರಿಕ ಕರ್ತವ್ಯಪ್ರಜ್ಞೆ ಎಂಬ ಐದು ಪ್ರಮುಖ ವಿಷಯಗಳ ಕುರಿತು ‘ಪಂಚ ಪರಿವರ್ತನೆ’ ಜನಜಾಗೃತಿ ಅಭಿಯಾನವನ್ನು ಈ ವರ್ಷ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‍ಎಸ್‍ಎಸ್) ಹಮ್ಮಿಕೊಳ್ಳಲಿದೆ ಎಂದು ಆರ್‍ಎಸ್‍ಎಸ್ ಕರ್ನಾಟಕ ಉತ್ತರ ಪ್ರಾಂತ ಸಹಕಾರ್ಯವಾಹ ಟಿ. ಪ್ರಸನ್ನ ತಿಳಿಸಿದರು.
ನಗರದ ಮೈಗೂರ ರಸ್ತೆ ಸಮೀಪದ ಕಲೂತಿ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಮಖಂಡಿ ಜಿಲ್ಲಾ ಶಾಖೆಯ ಆಶ್ರಯದಲ್ಲಿ ಶನಿವಾರ ನಡೆದ ಪ್ರಮುಖ ನಾಗರಿಕ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಎಲ್ಲ ಜಾತಿ-ಧರ್ಮದ ಜನರನ್ನು ಸ್ನೇಹಿತರು ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಒಂದಾಗಿಸಿ ಸಾಮಾಜಿಕ ಸಾಮರಸ್ಯ ಬೆಳೆಸುವ ಕಾರ್ಯಕ್ಕೆ ಸಂಘ ಆದ್ಯತೆ ನೀಡಲಿದೆ. ಹಬ್ಬ-ಹರಿದಿನಗಳು ಮತ್ತು ಕುಟುಂಬ ಸಮಾರಂಭಗಳಲ್ಲಿ ಎಲ್ಲರನ್ನು ಸಮಾನವಾಗಿ ಒಳಗೊಳ್ಳುವ ಮೂಲಕ ಸೌಹಾರ್ದ ವಾತಾವರಣ ನಿರ್ಮಿಸುವ ಪ್ರಯತ್ನ ನಡೆಯಲಿದೆ ಎಂದು ಹೇಳಿದರು.
ನೀರಿನ ಮಿತ ಬಳಕೆ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಸಂರಕ್ಷಣೆ, ಕುಟುಂಬ ವ್ಯವಸ್ಥೆಯಲ್ಲಿ ಉತ್ತಮ ಸಂಸ್ಕಾರ ಬೆಳೆಸುವುದು ಹಾಗೂ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಸ್ವ-ಆಧಾರಿತ ಜೀವನಶೈಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು.
ಸಂವಿಧಾನ, ಕಾನೂನು ಹಾಗೂ ಶಿಸ್ತನ್ನು ಎಲ್ಲ ಸಂದರ್ಭಗಳಲ್ಲೂ ಪಾಲಿಸಬೇಕು. ಯಾವುದೇ ಪ್ರಚೋದನಕಾರಿ ಘಟನೆ ನಡೆದರೂ ಕಾನೂನನ್ನು ಕೈಗೆತ್ತಿಕೊಳ್ಳದೆ ದೇಶ ಹಾಗೂ ಸಮಾಜದ ಹಿತವನ್ನು ಕಾಪಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬ ನಾಗರಿಕರೂ ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಭಾಗ ಕಾರ್ಯವಾಹ ವಿಠಲ ಕುಲಕರ್ಣಿ ಉಪಸ್ಥಿತರಿದ್ದರು. ಜಮಖಂಡಿ ಜಿಲ್ಲಾ ಕಾರ್ಯವಾಹ ಪ್ರಭು ಪಾಟೀಲ ಸ್ವಾಗತಿಸಿದರು. ವಕೀಲ ಶ್ರೀನಿವಾಸ ಸತ್ತಿಕರ ಕಾರ್ಯಕ್ರಮ ನಿರೂಪಿಸಿದರು. ನಿಂಗರಾಜ ಸಂಕರಡ್ಡಿ ವಂದಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.






























