
ಕಲಬುರಗಿ,ಜು.11-ನಗರ ಪೊಲೀಸ್ ವತಿಯಿಂದ 13.7.2026 ರಿಂದ ನಗರದಲ್ಲಿನ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ವಿಶೇಷ ಸಂಚಾರಿ ಕಾರ್ಯಾಚರಣೆ ನಡೆಸಲಾಗಿದ್ದು, ಕಳೆದ 10 ದಿನಗಳಲ್ಲಿ 4,078 ಜನರ ವಿರುದ್ಧ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮ ಕೈಗೊಂಡು 22,19,200 ರೂ.ದಂಡ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದ್ದಾರೆ.
1.7.2026 ರಿಂದ 10.7.2026 ರವರೆಗೆ ಎಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಹೆಲ್ಮೇಟ್ ಧರಿಸದೇ ವಾಹನ ಚಲಾಯಿಸಿದ 3932 ಜನರ ವಿರುದ್ಧ ಕ್ರಮ ಕೈಗೊಂಡು 19,66,000 ರೂ.ದಂಡ ವಿಧಿಸಲಾಗಿದೆ. ಹಿಂಬದಿ ಸವಾರರು ಹೆಲ್ಮೆಟ್ ಧರಿಸದೇ ವಾಹನಚಲಾಯಿಸಿದ 34 ಜನರ ವಿರುದ್ಧ ಕ್ರಮ ಕೈಗೊಂಡು 17,000 ರೂಪಾಯಿ ದಂಡ ವಿಧಿಸಲಾಗಿದೆ. ಕುಡಿದು ವಾಹನ ಚಲಾಯಿಸಿದ 23 ಜನರ ವಿರುದ್ಧ ಕ್ರಮ ಕೈಗೊಂಡು 1,90,000 ರೂಪಾಯಿ ದಂಡ ವಿಧಿಸಲಾಗಿದೆ. ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದ 36 ಜನರ ವಿರುದ್ಧ ಕ್ರಮ ಕೈಗೊಂಡು 18 ಸಾವಿರ ದಂಡ ವಿಧಿಸಲಾಗಿದೆ. ತ್ರಿಬಲ್ ರೈಡ್ ವಾಹನ ಚಲಾಯಿಸಿದ 32 ಜನರ ವಿರುದ್ಧ ಕ್ರಮ ಕೈಗೊಂಡು 16 ಸಾವಿರ ದಂಡ ವಿಧಿಸಲಾಗಿದೆ. ತಿರುಚಿದ ನಂಬರ್ ಪ್ಲೇಟ್ ಹಾಕಿ ವಾಹನ ಚಲಾಯಿಸಿದ 7 ಜನರ ವಿರುದ್ಧ ಕ್ರಮ ಕೈಗೊಂಡು 3,500 ರೂ.ದಂಡ ವಿಧಿಸಲಾಗಿದೆ. ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ 10 ಜನರ ವಿರುದ್ಧ ಕ್ರಮ ಕೈಗೊಂಡು 5 ಸಾವಿರ ರೂಪಾಯಿ ದಂಡ ವಿಧಸಲಾಗಿದೆ. ಅತಿವೇಗದ ಚಾಲನೆ ಮಾಡಿದ ಒಬ್ಬ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡು 1 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ವಿವಿಧ ಬಗೆಯ 3 ಅನ್ಯ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ 3,700 ರೂಪಾಯಿ ದಂಡ ವಿಧಿಸಲಾಗಿದೆ. ಕಳೆದ ತಿಂಗಳಿಂದ ಶಾಲಾ ಕಾಲೇಜುಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರಿ ನಿಯಮಗಳ ಪಾಲನೆ ಕುರಿತು ವಿದ್ಯಾರ್ಥಿಗಳಿಗೆ, ಯುವಕರಿಗೆ, ಆಟೋ ಚಾಲಕರಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದ್ದು, ಈ ಕಾರ್ಯಾಚರಣೆಯು ಮುಂದಿನ ದಿನಗಳಲ್ಲಿಯೂ ಕೂಡ ಮುಂದುವರೆಯಲಿದ್ದು, ವಿದ್ಯಾರ್ಥಿಗಳು, ಶಿಕ್ಷಕರು, ಯುವಕ, ಯುವತಿಯರು, ಆಟೋ ಚಾಲಕರು ಹಾಗೂ ಸಾರ್ವಜನಿಕರು ಸಾಮಾಜಿಕ ಜವಾಬ್ದಾರಿಯಿಂದ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.































