
ಕಲಬುರಗಿ,ಜು.11: ಇಲ್ಲಿನ ಬಂಬು ಬಜಾರ್ನ ಹೊಸ ಭೋವಿ ಗಲ್ಲಿಯಲ್ಲಿರುವ ಶ್ರೀ ಮರಗಮ್ಮ ದೇವಿ ದೇವಸ್ಥಾನದಲ್ಲಿ ದೇವಿಗೆ ನೂತನ ಮುಖವಾಡ ಹಾಗೂ ಬೆಳ್ಳಿಯ ಭವ್ಯ ಮುಕುಟವನ್ನು ಅರ್ಪಿಸುವ ಧಾರ್ಮಿಕ ಕಾರ್ಯಕ್ರಮ ಅತ್ಯಂತ ಸಡಗರಿಂದ ಜರುಗಿತು.
ಆನಂದಿ ಅಂಬಾ ಭವಾನಿ ಮಂದಿರದಿಂದ ಮುಂಜಾನೆ ದೇವಿಯ ಭವ್ಯ ಮೆರವಣಿಗೆ ಮತ್ತು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮೆರವಣಿಗೆಯ ಮುಂಚೂಣಿಯಲ್ಲಿ ಮಹಿಳೆಯರು ಅತ್ಯಂತ ಭಕ್ತಿಯಿಂದ ತಲೆಯ ಮೇಲೆ ಕಳಶ ಹೊತ್ತು ಸಾಗಿದರು. ಸಾಂಪ್ರದಾಯಿಕ ಡೊಳ್ಳು ಭಜನೆ ಹಾಗೂ ಸಕಲ ಭಜಂತ್ರಿ ವಾದ್ಯ ಮೇಳಗಳ ಮಂಗಳ ಧ್ವನಿಯೊಂದಿಗೆ ಹೊರಟ ಮೆರವಣಿಗೆಯು ಹಳೆ ಭೋವಿ ಗಲ್ಲಿ, ಕಪಡಾ ಬಜಾರ್, ಕಿರಾಣಾ ಬಜಾರ್, ಹುಮ್ನಾಬಾದ್ ಬೇಸ್, ಬಾಂಬು ಬಜಾರ್ ಮಾರ್ಗವಾಗಿ ಹೊಸ ಭೋವಿ ಗಲ್ಲಿಯ ಮರಗಮ್ಮ ದೇವಿ ಮಂದಿರವನ್ನು ತಲುಪಿತು.
ಈ ಭವ್ಯ ಪಲ್ಲಕ್ಕಿ ಉತ್ಸವದ ನೇತೃತ್ವವನ್ನು ಭೋವಿ ಸಮಾಜದ ಹಿರಿಯರಾದ ತುಕಾರಾಮ ನಾಇಂದ್ರಕರ್ ಹಾಗೂ ಶಂಕರರಾವ್ ಪುರಮ್ಕರ್ ಅವರು ವಹಿಸಿದ್ದರು.
ದೇವಿಯ ನೂತನ ಮುಖವಾಡ ಹಾಗೂ ಈ ಭವ್ಯ ಬೆಳ್ಳಿಯ ಮುಕುಟವನ್ನು ರಾಘವೇಂದ್ರ ತುಮಕೂರು ಮತ್ತು ಅವರ ಕುಟುಂಬದ ವತಿಯಿಂದ ಭಕ್ತಿಯ ಕಾಣಿಕೆಯಾಗಿ ದೇವಸ್ಥಾನಕ್ಕೆ ದಾನ ಮಾಡಲಾಗಿದೆ. ಮಂದಿರದಲ್ಲಿ ದೇವಿಗೆ ಸಕಲ ವಿಧಿ-ವಿಧಾನಗಳೊಂದಿಗೆ ಪೂಜೆ ನೆರವೇರಿಸಿ ಈ ಪವಿತ್ರ ಮುಖವಾಡ ಹಾಗೂ ಮುಕುಟವನ್ನು ಧರಿಸಲಾಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಮುಖರಾದ ಮಾರುತಿ ಪುರಮ್ಕರ್, ಲಕ್ಷ್ಮೀಕಾಂತ್ ಮನೋಕರ್, ಸಂಜಯ್ ವಾಡೇಕರ್, ಅಮರೇಶ್ ನಾಇಂದ್ರಕರ್, ಬಾಬುರಾವ್ ಯರಸ್ಕರ್, ವಿಠ್ಠಲ್ ಡಾಳಿಂಬಕರ್, ಗಜೇಂದ್ರ ನಾಇಂದ್ರಕರ್, ಚಂದ್ರಕಾಂತ್ ಆರ್. ನಾಇಂದ್ರಕರ್ ಸೇರಿದಂತೆ ಸಮಾಜದ ಅನೇಕ ಮುಖಂಡರು, ಮಂಡಳಿಗಳ ಪದಾಧಿಕಾರಿಗಳು ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದು ದೇವಿಯ ಕೃಪೆಗೆ ಪಾತ್ರರಾದರು.































