Home ಸುದ್ದಿ ಅಂತರಾಷ್ಟ್ರೀಯ ಕದನ ವಿರಾಮ ಅಂತ್ಯ- ಇರಾನ್ ನಿರಾಕರಣೆ

ಕದನ ವಿರಾಮ ಅಂತ್ಯ- ಇರಾನ್ ನಿರಾಕರಣೆ

ಕದನ ವಿರಾಮ ಅಂತ್ಯ- ಇರಾನ್ ನಿರಾಕರಣೆ
ವಾಷಿಂಗ್ಟನ್/ಟೆಹ್ರಾನ್,ಜು.11
-ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತೊಮ್ಮೆ ತಾರಕಕ್ಕೇರಿದೆ. ಇರಾನ್‍ನ ವಿನಂತಿಯ ಮೇರೆಗೆ ವಾಷಿಂಗ್ಟನ್ ಮಾತುಕತೆಯನ್ನು ಪುನರಾರಂಭಿಸಲು ಒಪ್ಪಿಕೊಂಡಿದೆ, ಆದರೆ ಇರಾವಿನೊಂದಿಗಿನ “ಕದನ ವಿರಾಮ ಮುಕ್ತಾಯಗೊಂಡಿದೆ” ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.


ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ, “ಇರಾನ್ ನಮ್ಮೊಂದಿಗೆ ಮಾತುಕತೆ ಮುಂದುವರಿಸಲು ವಿನಂತಿಸಿದೆ. ನಾವು ಅದಕ್ಕೆ ಒಪ್ಪಿದ್ದೇವೆ, ಆದರೆ ಕದನ ವಿರಾಮ ಕೊನೆಗೊಂಡಿದೆ ಎಂಬುದನ್ನು ಯಾವುದೇ ಸಂದಿಗ್ಧತೆಯಿಲ್ಲದೆ ಸ್ಪಷ್ಟಪಡಿಸಿದ್ದೇವೆ” ಎಂದು ಬರೆದುಕೊಂಡಿದ್ದಾರೆ.
ಇರಾನ್‍ನಿಂದ ವರದಿಗಳ ನಿರಾಕರಣೆ
ಟ್ರಂಪ್ ಅವರ ಈ ಹೇಳಿಕೆಯನ್ನು ಇರಾನ್ ತಳ್ಳಿಹಾಕಿದೆ. ಮುಂದಿನ ವಾರ ಇಸ್ಲಾಮಾಬಾದ್ ಅಥವಾ ಸ್ವಿಟ್ಜರ್ಲೆಂಡ್‍ನಲ್ಲಿ ಮಾತುಕತೆಗಳು ನಡೆಯಲಿವೆ ಎಂಬ ವರದಿಗಳು ಸುಳ್ಳು ಮತ್ತು ಆಧಾರರಹಿತ ಎಂದು ಇರಾನ್‍ನ ಮಾತುಕತೆ ತಂಡದ ಆಪ್ತ ಮೂಲಗಳು ತಿಳಿಸಿವೆ. “ಯಾವುದೇ ಹೊಸ ರಾಜತಾಂತ್ರಿಕ ಬೆಳವಣಿಗೆಗಳಿದ್ದರೂ ಅದನ್ನು ಅಧಿಕೃತ ಮಾಧ್ಯಮಗಳ ಮೂಲಕವೇ ಪ್ರಕಟಿಸಲಾಗುವುದು” ಎಂದು ಇರಾನ್ ಸ್ಪಷ್ಟಪಡಿಸಿದೆ.


ಇರಾನ್‍ನ ಮುಖ್ಯ ಸಂಧಾನಕಾರ ಹಾಗೂ ಸಂಸತ್ ಸ್ಪೀಕರ್ ಮೊಹಮ್ಮದ್ ಘಾಲಿಬಾಫ್ ಮಾತನಾಡಿ, “ಅಮೆರಿಕ ಒಪ್ಪಂದಕ್ಕೆ ದ್ರೋಹ ಬಗೆದರೆ, ನಾವು ಪೂರ್ಣ ಪ್ರಮಾಣದ ರಕ್ಷಣಾತ್ಮಕ ಹೋರಾಟಕ್ಕೆ ಸಿದ್ಧರಿದ್ದೇವೆ. ಇರಾನ್ ಎಂದಿಗೂ ಶರಣಾಗುವುದಿಲ್ಲ. ಈ ಯುದ್ಧವು ಇರಾನ್‍ನ ಶರಣಾಗತಿಯೊಂದಿಗೆ ಕೊನೆಗೊಳ್ಳುವುದಿಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿಡಬೇಕು” ಎಂದು ಎಚ್ಚರಿಸಿದ್ದಾರೆ. ಜೊತೆಗೆ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಒಗ್ಗಟ್ಟಾಗುವಂತೆ ಮುಸ್ಲಿಂ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಭೀಕರ ದಾಳಿಗಳ ನಂತರ ಉಂಟಾಗಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಖತಾರ್ ಮತ್ತು ಪಾಕಿಸ್ತಾನದ ಮಧ್ಯಸ್ಥಿಕೆದಾರರು ಪ್ರಯತ್ನಿಸುತ್ತಿದ್ದಾರೆ. ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಜ್ಯಾರೆಡ್ ಕುಶ್ನರ್ ಅವರು ಖತಾರ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.


ಇರಾನ್ ದೇಶವು ಹಾರ್ಮುಜ್ ಜಲಸಂಧಿಯಲ್ಲಿ ಅಂತರರಾಷ್ಟ್ರೀಯ ಹಡಗುಗಳ ಮೇಲೆ ದಾಳಿಯನ್ನು ಪುನರಾರಂಭಿಸಿದ ಹಿನ್ನೆಲೆಯಲ್ಲಿ ಅಮೆರಿಕದ ಖಜಾನೆ ಇಲಾಖೆಯು ಇರಾನ್‍ನ ಹಣಕಾಸು ಸೌಲಭ್ಯದಾರ ಅಲಿ ಅನ್ಸಾರಿ ಸೇರಿದಂತೆ ಹಲವರ ಮೇಲೆ ಹೊಸ ಆರ್ಥಿಕ ನಿರ್ಬಂಧಗಳನ್ನು ಹೇರಿದೆ. ಈ ಸಂಘರ್ಷದ ಪರಿಣಾಮವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಜಾಗತಿಕ ಹಡಗು ಸಂಚಾರ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಇಂಧನ ಮಾರುಕಟ್ಟೆಯ ಮೇಲೆ ತೀವ್ರ ಒತ್ತಡ ಉಂಟಾಗಿದೆ.