
ನಾಸೊ (ಬಹಾಮಾಸ್),ಜು೧೧:ಇಲ್ಲಿನ ನಾರ್ತ್ ಆಂಡ್ರೋಸ್ ದ್ವೀಪದ ಸಮೀಪ ಸಂಭವಿಸಿದ ಭೀಕರ ಸಣ್ಣ ವಿಮಾನ ಅಪಘಾತದಲ್ಲಿ ಒಟ್ಟು ೧೦ ಜನರು ಮೃತಪಟ್ಟಿದ್ದಾರೆ.
ಅಪಘಾತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಹಾಮಾಸ್ ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ ’ಫ್ಲೆಮಿಂಗೊ ಏರ್ ಸಂಸ್ಥೆಯ ಎಲ್ಲಾ ವಿಮಾನಗಳ ಹಾರಾಟ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
ರಾಜಧಾನಿ ನಾಸೊದ ಲಿಂಡೆನ್ ಪಿಂಡ್ಲಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಯಾನ್ ಆಂಡ್ರೋಸ್ ಕಡೆಗೆ ಹೊರಟಿದ್ದ ಬಹಾಮಾಸ್ ನೋಂದಾಯಿತ ’ಸೆಸ್ನಾ ೪೦೨’ ಹೆಸರಿನ ಸಣ್ಣ ವಿಮಾನವು ಹಾರಾಟದ ಕೆಲವೇ ಸಮಯದಲ್ಲಿ ನಿಯಂತ್ರಣ ತಪ್ಪಿ ಸಮುದ್ರದ ನೀರಿನಲ್ಲಿ ಪತನಗೊಂಡಿದೆ ಎಂದು ಬಹಾಮಾಸ್ ವಿಮಾನ ಅಪಘಾತ ತನಿಖಾ ಪ್ರಾಧಿಕಾರ ತಿಳಿಸಿದೆ. ವಿಮಾನದಲ್ಲಿದ್ದ ಒಬ್ಬರು ಅಪಘಾತದಿಂದ ಬದುಕುಳಿದಿದ್ದಾರೆ ಎಂದು ಆರಂಭದಲ್ಲಿ ವರದಿಯಾಗಿತ್ತಾದರೂ, ತೀವ್ರ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಂತರ ಮೃತಪಟ್ಟಿರುವುದಾಗಿ ಪ್ರಧಾನಿ ಖಚಿತಪಡಿಸಿದ್ದಾರೆ. ಮೃತರ ಗುರುತನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ.
ಬಹಾಮಾಸ್ನ ಇಂಧನ ಮತ್ತು ವಿಮಾನಯಾನ ಸಚಿವೆ ಜೊಬೆತ್ ಕೋಲ್ಬಿ-ಡೇವಿಸ್ ಪ್ರತಿಕ್ರಿಯಿಸಿ, ನಿನ್ನೆ ಒಂದೇ ದಿನ ಎರಡು ಪ್ರಮುಖ ಸುರಕ್ಷತಾ ಲೋಪಗಳು ವರದಿಯಾಗಿವೆ. ಅಪಘಾತಕ್ಕೂ ಮುನ್ನ ಫ್ಲೆಮಿಂಗೊ ಏರ್ ಸಂಸ್ಥೆಯ ಮತ್ತೊಂದು ವಿಮಾನ ಮಾಯಾಗುವಾನಾಕ್ಕೆ ತೆರಳುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡು ತರಾತುರಿಯಲ್ಲಿ ನಾಸೊಗೆ ಮರಳಿತ್ತು. ಪ್ರಯಾಣಿಕರು ಕೆಳಗಿಳಿದ ತಕ್ಷಣ ಆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಾರಾಟವನ್ನು ರದ್ದುಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.
ನಾವು ದೇಶದ ೫೩ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದಾಗ ಈ ಕರಾಳ ದುರಂತ ಸಂಭವಿಸಿದೆ. ಇಡೀ ದೇಶವೇ ಇಂದು ಕಣ್ಣೀರಲ್ಲಿ ಮುಳುಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು” ಎಂದು ಬಹಾಮಾಸ್ ಪ್ರಧಾನಿ ಫಿಲಿಪ್ ಬ್ರೇವ್ ಡೇವಿಸ್ ತೀವ್ರ ಕರಳು ಬೆಳಕಿನ ಆಘಾತ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ೨೦೧೪ರಲ್ಲಿ ಗ್ರ್ಯಾಂಡ್ ಬಹಾಮಾಸ್ನಲ್ಲಿ ನಡೆದಿದ್ದ ಮತ್ತೊಂದು ಭೀಕರ ವಿಮಾನ ಅಪಘಾತವನ್ನು ನೆನಪಿಸಿದೆ.
ಅಂದು ಲಿಯರ್ ೩೬ ಎಕ್ಸಿಕ್ಯೂಟಿವ್ ಜೆಟ್ ವಿಮಾನ ಪತನಗೊಂಡು ಪ್ರಮುಖ ಕ್ರಿಶ್ಚಿಯನ್ ಧರ್ಮಗುರು ಮೈಲ್ಸ್ ಮುನ್ರೋ ಸೇರಿದಂತೆ ೯ ಜನರು ಸಾವನ್ನಪ್ಪಿದ್ದರು. ಮಾಧ್ಯಮಗಳ ಪ್ರಕಾರ, ಈಗ ನಡೆದಿರುವ ಅಪಘಾತದ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
































