Home ಮುಖಪುಟ ಸುದ್ದಿ ಟ್ರಂಪ್ ಹತ್ಯೆಗೆ ಇರಾನ್‌ನಿಂದ ಹೊಸ ಸಂಚು

ಟ್ರಂಪ್ ಹತ್ಯೆಗೆ ಇರಾನ್‌ನಿಂದ ಹೊಸ ಸಂಚು

ವಾಷಿಂಗ್ಟನ್/ಟೆಲ್ ಅವಿವ್.ಜು೧೦:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಇರಾನ್ ಹೊಸದಾಗಿ ಸಂಚು ರೂಪಿಸಿದೆ ಎಂಬ ಅತ್ಯಂತ ನಿರ್ದಿಷ್ಟ ಹಾಗೂ ಆಘಾತಕಾರಿ ಗುಪ್ತಚರ ಮಾಹಿತಿಯನ್ನು ಇಸ್ರೇಲ್ ಸರ್ಕಾರವು ಅಮೆರಿಕದೊಂದಿಗೆ ಹಂಚಿಕೊಂಡಿದೆ ಎಂದು ಅಮೆರಿಕಾದ ’ದಿ ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ವರದಿ ಮಾಡಿದೆ.

ಇರಾನ್ ಮತ್ತು ಅಮೆರಿಕ ನಡುವೆ ಇತ್ತೀಚೆಗೆ ನಡೆದ ದಾಳಿ-ಪ್ರತಿದಾಳಿಗಳಿಂದಾಗಿ ಉಭಯ ದೇಶಗಳ ನಡುವಿನ ಉದ್ವಿಗ್ನತೆ ತುತ್ತತುದಿಗೆ ತಲುಪಿರುವ ಬೆನ್ನಲ್ಲೇ ಈ ಹೊಸ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಟ್ರಂಪ್ ಅವರ ಮೊದಲ ಅವಧಿಯ ಅಧ್ಯಕ್ಷತೆಯಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಕುದ್ಸ್ ಫೋರ್ಸ್ ಕಮಾಂಡರ್ ಜನರಲ್ ಖಾಸಿಂ ಸುಲೈಮಾನಿ ಹತ್ಯೆಗೀಡಾಗಿದ್ದರು. ಅಂದಿನಿಂದಲೂ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳಲು ಇರಾನ್ ಹೊಂಚು ಹಾಕುತ್ತಲೇ ಬಂದಿದೆ.

=
ಇಸ್ರೇಲ್ ನೀಡಿದ ಈ ಹೊಸ ಎಚ್ಚರಿಕೆಯನ್ನು ಅಮೆರಿಕದ ಭದ್ರತಾ ಸಂಸ್ಥೆಗಳಿಗೆ ರವಾನಿಸಲಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಅಮೆರಿಕದ ಗುಪ್ತಚರ ಸಂಸ್ಥೆಗಳು ಕಳೆದ ಕೆಲವು ವಾರಗಳಿಂದ ಟ್ರಂಪ್ ಮೇಲಿನ ದಾಳಿಯ ಭೀತಿಯನ್ನು ನಿರಂತರವಾಗಿ ಗಮನಿಸುತ್ತಿದ್ದವು. ಆದರೆ ಇಸ್ರೇಲ್ ಈ ವಾರ ನೀಡಿರುವ ಮಾಹಿತಿ ಅತ್ಯಂತ ನಿರ್ದಿಷ್ಟವಾದ ರಹಸ್ಯ ಯೋಜನೆಯೊಂದಕ್ಕೆ ಸಂಬಂಧಿಸಿದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಇರಾನ್ ವಿರುದ್ಧ ಅಮೆರಿಕ ಮತ್ತಷ್ಟು ಕಠಿಣ ಮಿಲಿಟರಿ ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಲು ಮತ್ತು ಟ್ರಂಪ್ ಅವರ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಇಸ್ರೇಲ್ ಈ ಮಾಹಿತಿಯನ್ನು ಬಳಸಿಕೊಳ್ಳುತ್ತಿರಬಹುದು ಎಂದೂ ಕೆಲವು ಅಮೆರಿಕದ ಹಿರಿಯ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ಟರ್ಕಿಯ ಅಂಕಾರಾದಲ್ಲಿ ನಡೆದ ನಟೋ ಶೃಂಗಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಜೀವಕ್ಕಿರುವ ಭೀತಿಯನ್ನು ಬಹಿರಂಗಪಡಿಸಿದ್ದಾರೆ. “ಅವರು ಅಮೆರಿಕದ ನಾಯಕನನ್ನು, ಅಂದರೆ ನನ್ನನ್ನು ಮುಗಿಸಲು ಬಯಸಿದ್ದಾರೆ. ನಾನು ಅವರ ಪ್ರತಿಯೊಂದು ಹಿಟ್ ಲಿಸ್ಟ್‌ನಲ್ಲಿದ್ದೇನೆ. ಸದ್ಯಕ್ಕೆ ನಾನು ಸ್ವಲ್ಪ ಅದೃಷ್ಟಶಾಲಿಯಾಗಿದ್ದೇನೆ, ಆದರೆ ಈ ಅದೃಷ್ಟ ಎಷ್ಟು ದಿನ ಇರುತ್ತದೋ ತಿಳಿಯದು,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಇತ್ತೀಚೆಗೆ ನಿಧನರಾದ ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸೇರಿದ್ದ ಇರಾನ್ ನಾಗರಿಕರು “ಟ್ರಂಪ್‌ಗೆ ಸಾವು” ಎಂದು ಘೋಷಣೆ ಕೂಗುತ್ತಾ, “ನಾವು ಟ್ರಂಪ್‌ನನ್ನು ಕೊಲ್ಲುತ್ತೇವೆ” ಎಂಬ ಬ್ಯಾನರ್‌ಗಳನ್ನು ಪ್ರದರ್ಶಿಸಿರುವುದು ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಇರಾನ್ ಸಂಘರ್ಷದ ಮುಂದಿನ ಹಾದಿಯ ಕುರಿತು ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿವೆ ಎನ್ನಲಾಗಿದೆ. ನೆತನ್ಯಾಹು ಅವರು ಇರಾನ್ ಮೇಲಿನ ಮಿಲಿಟರಿ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಲು ಒಲವು ತೋರುತ್ತಿದ್ದರೆ, ಟ್ರಂಪ್ ಅವರು ಜಾಗತಿಕ ಆರ್ಥಿಕತೆಯ ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಯುದ್ಧದಿಂದ ಹೊರಬರಲು ಬಯಸಿದ್ದಾರೆ. ಕಳೆದ ತಿಂಗಳಷ್ಟೇ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇರಾನ್‌ನೊಂದಿಗೆ ಅತ್ಯಂತ ಸೂಕ್ಷ್ಮ ಕದನ ವಿರಾಮ ಒಪ್ಪಂದ ಏರ್ಪಟ್ಟಿತ್ತು.

ಈ ಬೆಳವಣಿಗೆಗಳ ನಡುವೆ, ಗುರುವಾರ ಟ್ರಂಪ್ ಮತ್ತು ನೆತನ್ಯಾಹು ಅವರು ದೂರವಾಣಿ ಮೂಲಕ ದೀರ್ಘ ಚರ್ಚೆ ನಡೆಸಿದ್ದು, ಉಭಯ ದೇಶಗಳ ನಡುವೆ ರಕ್ಷಣಾ ಮತ್ತು ಗುಪ್ತಚರ ಸಮನ್ವಯವನ್ನು ಮುಂದುವರಿಸಲು ಒಪ್ಪಿಕೊಂಡಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ತಿಳಿಸಿದೆ.