
ಕಲಬುರಗಿ.ಜು.10: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಸಾಬೀತಾದ್ದರಿಂದ ನಾಗಪ್ಪ ಯರಗೋಳ ( 24) ಎಂಬಾತನಿಗೆ 20 ವರ್ಷ ಜೈಲು, 50 ಸಾವಿರ ರೂ ದಂಡ ಹಾಗೂ ಅಪ್ರಾಪ್ತೆಯ ವಿವಾಹ ಮಾಡಿಕೊಂಡ ಸಿದ್ದಪ್ಪ ನಾಲವಾರ ಎಂಬಾತನಿಗೆ 1 ವರ್ಷ ಜೈಲು 10 ಸಾವಿರ ರೂ ದಂಡ ಹಾಗೂ ಬಾಲ್ಯವಿವಾಹ ಮಾಡಿಕೊಟ್ಟ ಹುಡುಗಿಯ ತಂದೆ ತಾಯಿಗೆ ತಲಾ 1 ವರ್ಷ ಜೈಲು ಮತ್ತು 10 ಸಾವಿರ ರೂ ದಂಡ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಪೊಕ್ಸೋ) ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ.
ವಾಡಿ ಠಾಣೆ ವ್ಯಾಪ್ತಿಯ ಠಾಣೆಯೊಂದರ ಗ್ರಾಮವೊಂದರಲ್ಲಿ 2024 ರ ಸಪ್ಟೆಂಬರ್ 5 ರಂದು ಅಪರಾಧಿ ನಾಗಪ್ಪನು ಅಪ್ರಾಪ್ತೆಯನ್ನು ಒತ್ತಾಯದಿಂದ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ.ಅಪ್ರಾಪ್ತೆಗೆ ಆಗಲೇ ಮದುವೆ ಆದ ವಿಚಾರ ತನಿಖೆಯ ವೇಳೆ ತಿಳಿದುಬಂದಿತ್ತು. ಪ್ರಕರಣವನ್ನು ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಪೊಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್ ಚವ್ಹಾಣ ಅವರು ತೀರ್ಪು ನೀಡಿ ಆದೇಶಿದ್ದಾರೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ ತುಪ್ಪದ ಅವರು ವಾದ ಮಂಡಿಸಿದ್ದರು.





























