Home ಮುಖಪುಟ ಸುದ್ದಿ ಆನ್‌ಲೈನ್‌ನಲ್ಲಿ ಭಯೋತ್ಪಾದಕ ನಂಟು ಕರ್ನಾಟಕ ಸೇರಿ ೬ ರಾಜ್ಯಗಳಲ್ಲಿ ಎನ್‌ಐಎ ದಾಳಿ

ಆನ್‌ಲೈನ್‌ನಲ್ಲಿ ಭಯೋತ್ಪಾದಕ ನಂಟು ಕರ್ನಾಟಕ ಸೇರಿ ೬ ರಾಜ್ಯಗಳಲ್ಲಿ ಎನ್‌ಐಎ ದಾಳಿ

ಬೆಂಗಳೂರು,ಜು.೯- ಇಸ್ಲಾಮಿಕ್ ಉಗ್ರ ಸಂಘಟನೆಗಳ ನಂಟು ಹೊಂದಿದ್ದ ಜಾಲವನ್ನು ಬೇಧಿಸಲು ಕಾರ್ಯಾಚರಣೆ ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಎಕಕಾಲದ ದಾಳಿ ನಡೆಸಿದ್ದಾರೆ.


ರಾಜ್ಯದ ಬಳ್ಳಾರಿ, ಆಂಧ್ರಪ್ರದೇಶ, ಬಿಹಾರ, ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧ ಮುಂದುವರೆಸಲಾಗಿದೆ.


ಉಗ್ರ ಚಟುವಟಿಕೆಗಳ ಪರ ಪ್ರಚಾರ ನಡೆಸುತ್ತಿದ್ದ ಆಂಧ್ರಪ್ರದೇಶದ ವಿಜಯವಾಡದ ವಿಂಚ್‌ಪೇಟೆಯ ನಿವಾಸಿ ಮೊಹಮ್ಮದ್ ರೆಹ್ಮತುಲ್ಲಾ ಷರೀಫ್ (೨೩ ವರ್ಷ) ಎಂಬಾತನನ್ನು ಮಾರ್ಚ್‌ನಲ್ಲಿ ಅಲ್ಲಿನ ಟೌನ್ ಠಾಣೆ ಪೊಲೀಸರು ಬಂಧಿಸಿದ್ದರು. ಇಸ್ರಾರ್ ಅಹ್ಮದ್, ಜಾಕಿರ್ ನಾಯ್ಕ್ ಅವರಂತಹ ಇಸ್ಲಾಮಿಕ್ ಪ್ರಚಾರಕರು ಹಾಗೂ ಭಯೋತ್ಪಾದಕ ಸಂಘಟನೆಗಳ ನಾಯಕರ ಪ್ರಭಾವಕ್ಕೊಳಗಾಗಿದ್ದ ಆರೋಪಿ, ಎಕ್ಯೂ ಐಎಸ್ ಮತ್ತು ಐಎಸ್ ಐಎಸ್ ನಂತಹ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಪರ ಜಿಹಾದಿ ಚಟುವಟಿಕೆಗಳಲ್ಲಿ ಭಾಗವಹಿಸಲು ನಿರ್ಧರಿಸಿದ್ದಾಗಿ ಬಾಯ್ಬಿಟ್ಟಿದ್ದನು.


ಅಲ್ಲದೇ ಭಯೋತ್ಪಾದಕ ಸಂಘಟನೆಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಫಾಲೋ ಮಾಡುತ್ತಾ, ಭಾರತದಲ್ಲಿ ಖಿಲಾಫತ್ ಸ್ಥಾಪಿಸುವುದನ್ನು ಬೆಂಬಲಿಸುವ ಜಿಹಾದಿ ಮತ್ತು ಭಯೋತ್ಪಾದಕ ವಿಡಿಯೋಗಳು ಹಾಗೂ ವಿಷಯಗಳನ್ನು ಹರಡುತ್ತಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿತ್ತು.


ವಿಜಯವಾಡದ ಭವಾನಿಪುರಂನ ಮೊಹಮ್ಮದ್ ಡ್ಯಾನಿಶ್ ಮತ್ತು ಮಹಾಂತಿಪುರಂನ ಮಿರ್ಜಾ ಸೊಹೈಲ್ ಬೇಗ್ ಎಂಬ ಸಹಚರರ ಮೂಲಕ ರೆಹ್ಮತುಲ್ಲಾ ಷರೀಫ್ ಉಗ್ರ ಕೃತ್ಯಗಳ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುತ್ತಿದ್ದ. ಸಾಮಾಜಿಕ ಜಾಲತಾಣದ ಮೂಲಕ ಈತನಿಗೆ ಪರಿಚಯವಾಗಿದ್ದ ’ಅಲ್-ಹಕೀಮ್ ಶುಕೂರ್’ ಎಂಬ ವಿದೇಶಿ ಹ್ಯಾಂಡ್ಲರ್, ಎಕ್ಯೂ ಐಎಸ್ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಬಿಹಾರದ ಶಾದ್ಮಾನ್ ದಿಲ್ಕಶ್ ಮತ್ತು ಹೈದರಾಬಾದ್‌ನ ಸಯೀದಾ ಬೇಗಂ ಜೊತೆ ಕೈಜೋಡಿಸಲು ಸೂಚಿಸಿದ್ದ ಎಂದು ತಿಳಿದು ಬಂದಿತ್ತು.


ಅಷ್ಟೇ ಅಲ್ಲದೆ, ಐಎಸ್ ಐ ಎಸ್ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಉಗ್ರಗಾಮಿ ಗುಂಪೊಂದರ ಸದಸ್ಯರಾದ ಬಿಹಾರದ ಅಜ್ಮಾನುಲ್ಲಾ ಖಾನ್, ದೆಹಲಿಯ ಲಕ್ಕಿ ಅಹ್ಮದ್, ಪಶ್ಚಿಮ ಬಂಗಾಳದ ಮಿರ್ ಆಶಿಫ್ ಅಲಿ, ರಾಜಸ್ಥಾನದ ಜಿಶಾನ್, ಕರ್ನಾಟಕದ ಅಬ್ದುಲ್ ಸಲಾಮ್, ಮಹಾರಾಷ್ಟ್ರದ ಶಾರುಖ್ ಖಾನ್ ಮತ್ತು ಶೇಖ್ ಫಿಯಾಜ್ ಉರ್ ರೆಹಮಾನ್ ಅವರ ಇನ್‌ಸ್ಟಾಗ್ರಾಮ್ ಐಡಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ಪಡೆದು ಅವರೊಂದಿಗೂ ಸಂಪರ್ಕ ಸಾಧಿಸಲು ಸೂಚಿಸಿದ್ದ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿತ್ತು.


ಬಳಿಕ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು. ಇದೀಗ ಬಳ್ಳಾರಿ, ಆಂಧ್ರಪ್ರದೇಶ, ಬಿಹಾರ, ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದ ವಿವಿಧೆಡೆ ಏಕಕಾಲಕ್ಕೆ ಎನ್?ಐಎ ದಾಳಿ ನಡೆದಿದೆ.