Home ಜಿಲ್ಲೆ ಕಲಬುರಗಿ ಭಂಕೂರ : ಬಂಡಿ ಓಡಿಸಿ ಕರಿ ಹರಿಯುವ ಕೆರಿಯಮ್ಮದೇವಿ ಜಾತ್ರೆ ಸಂಪನ್ನ

ಭಂಕೂರ : ಬಂಡಿ ಓಡಿಸಿ ಕರಿ ಹರಿಯುವ ಕೆರಿಯಮ್ಮದೇವಿ ಜಾತ್ರೆ ಸಂಪನ್ನ

ಶಹಾಬಾದ:ತಾಲೂಕಿನ ಭಂಕೂರ ಗ್ರಾಮದ ಗ್ರಾಮ ದೇವತೆಯಾದ ಕೆರಿಯಮ್ಮ ದೇವಿಯ ಜಾತ್ರೆಯಲ್ಲಿ ಮಂದಿರದ ಪಕ್ಕದಲ್ಲಿರುವ ಗುಡ್ಡದಿಂದ ಬಂಡಿ ಓಡಿಸುವುದು ಹಾಗೂ ಕರಿ ಹರಿಯುವ ವಿಶಿಷ್ಟವಾದ ಕಾರ್ಯಕ್ರಮ ಕಾರ ಹುಣ್ಣಿಮೆ ನಿಮಿತ್ತ ಸೋಮವಾರ ಅಪಾರ ಭಕ್ತಾಧಿಗಳ ಮಧ್ಯೆ ಸಡಗರ – ಸಂಭ್ರಮದಿಂದ ನಡೆಯಿತು.
ರವಿವಾರ ದೇವಿಯ ಮೂರ್ತಿಯನ್ನು ದೇವಸ್ಥಾನದಿಂದ ಮೆರವಣಿಗೆ ಮುಖಾಂತರ ಕಾಗಿಣಾ ನದಿಗೆ ಕರೆದುಹೋಗಿ ಗಂಗಾಸ್ನಾನ ಮಾಡಲಾಯಿತು. ಬೆಳಿಗ್ಗೆ ಗ್ರಾಮದ ಅಗಸಿಯ ಮುಂಭಾಗದಲ್ಲಿ ದೇವಿಯ ಮೂರ್ತಿಯನ್ನು ತಂದ ನಂತರ ಗ್ರಾಮಸ್ಥರು ಕಾಯಿ ಮತ್ತು ಕರ್ಪೂರ ಅರ್ಪಿಸಿದರು. ನಂತರ ಮೂರ್ತಿಯನ್ನು ಮಂದಿರದಕ್ಕೆ ತಂದು ಮರುಸ್ಥಾಪಿಸಲಾಯಿತು.ನಂತರ ವಿಶೇಷ ಪೂಜೆ ಸಲ್ಲಿಸಿದರು.ಸಂಜೆ ಅಂಕಲಮ್ಮ ಗುಡಿಯಿಂದ ಮೆರವಣಿಗೆ ಮುಖಾಂತರ ಬಂಡಿಯನ್ನು ದೇವಸ್ಥಾನಕ್ಕೆ ತರಲಾಯಿತು. ಕರಿಹರಿಯುವ ಬ್ರಾಹ್ಮಣ ಹಾಗೂ ಬಂಡಿ ಓಡಿಸುವ ಮಜ್ಜಿಗೆ ಮನೆತನದ ವ್ಯಕ್ತಿ ದೇವಿಯ ದರ್ಶನ ಪಡೆದರು.
ಬಂಡಿ ಓಡಿಸಿ ಕರಿ ಹರಿದರು : ಕರಿ ಹರಿಯುವುದಕ್ಕಾಗಿ ಸುಮಾರು ದಿನಗಳಿಂದ ಜೋಡೆತ್ತುಗಳನ್ನು ಮೇಯಿಸಿ ಬಂಡಿಗೆ ಕಟ್ಟುತ್ತಾರೆ. ಅದರೂಳಗೆ ಖಡ್ಗದಾರಿಯಾದ ಕುಲಕರ್ಣಿ ಹಾಗೂ ಬಾರಕೋಲು ಹಿಡಿದ ಮಜ್ಜಿಗೆ ಮನೆತನದ ವ್ಯಕ್ತಿ ವಿಶೇಷ ಪೂಜೆ ಸಲ್ಲಿಸಿ ಸಂಜೆ ಮಂದಿರದ ಗುಡ್ಡದಿಂದ ಬಂಡಿ ಓಡುವ ಮನಮೋಹಕ ದೃಶ್ಯವನ್ನು ಸಾವಿರಾರು ಜನರು ನೋಡಿ ದೇವಿಗೆ ಕೈ ಮುಗಿದು ಧನ್ಯಾರ್ಥತೆಯನ್ನು ಅನುಭವಿಸಿದರು.
ನಂತರ ಬಂಡಿಯೂ ಊರೊಳಗೆ ಪ್ರವೇಶಿಸಿ ಈಶ್ವರ ದೇವಸ್ಥಾನದ ಹತ್ತಿರ ಬಂದು ನಿಂತು ಅಗಸಿಗೆ ಕಟ್ಟಿದ ಸಿಂಗರಿಸಿದ ಹಗ್ಗವನ್ನು (ಕರಿ) ಹರಿಯುವ ರೋಮಾಂಚನ ದೃಶ್ಯವನ್ನು ನೋಡಲು ಸಾವಿರಾರು ಜನರು ಕಿಕ್ಕಿರಿದು ನಿಂತ್ತಿತ್ತು. ಖಡ್ಗದಾರಿಯಾದ ಕುಲಕರ್ಣಿ ಹಗ್ಗವನ್ನು ಕಡಿದಾಗ ಎಲ್ಲರೂ ಕರಿಹರಿಯಿತು ಎಂದು ಹರ್ಷೋದ್ಘಾರಗೈದರು.
ಈ ಒಂದು ಜಾತ್ರೆಯಲ್ಲಿ ಯಾವುದೇ ಜಾತಿ ಬೇಧವಿಲ್ಲದೇ ಎಲ್ಲಾ ಜಾತಿ ಜನಾಂಗದವರು ತಮ್ಮ ತಮ್ಮ ಚಾಜಾ ಮಾಡುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ.
ದೂರದ ಆಂದ್ರಪ್ರದೇಶ, ಗುಜರಾತ, ಮಹಾರಾಷ್ಟ್ರ ಹಾಗೂ ಸುತ್ತಮುತ್ತಲಿನ ಶಹಾಬಾದ, ವಾಡಿ,ರಾವೂರ, ಮುತ್ತಗಿ, ಶಂಕರವಾಡಿ, ಭಂಕೂರ ವಾಡಾ, ತರಿತಾಂಡಾ, ತೆಗನೂರ ಮುಗುಳನಾಗಾಂವ, ನಂದೂರ , ಅಲ್ದಿಹಾಳ, ಪೇಠಸಿರೂರ, ಗೋಳಾ,ಮಾಲಗತ್ತಿ ಮುಂತಾದ ಗ್ರಾಮದ ಸಮಸ್ತ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯ ನಿಮಿತ್ಯ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.