
ಪುತ್ತೂರು: ಲೋಕ ಅದಾಲತ್ ಮೂಲಕ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕೌಟುಂಬಿಕ ಕಲಹಗಳು ಬೇರೆಯೇ ರೂಪ ತಾಳಿ ನ್ಯಾಯಾಲಯಗಳ ಮೆಟ್ಟಿಲೇರುತ್ತಿದೆ. ಅಂತಹ ಪ್ರಕರಣಗಳನ್ನು ಗುರುತಿಸಿ ಮುಗಿಸಬೇಕಿದೆ. ಜತೆಗೆ ಜಾಗದ ತಕರಾರುಗಳನ್ನು ರಾಜಿ ಸಂಧಾನದ ಮೂಲಕ ಮುಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪುತ್ತೂರು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಹೇಳಿದರು.
ಜು. ೧೧ ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಆದಾಲತ್ ಹಿನ್ನೆಲೆಯಲ್ಲಿ ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪುತ್ತೂರು ೭ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶೆ ಸುಮಂಗಲಾ ಮಾತನಾಡಿ, ಸರ್ಕಾರದ ಮಟ್ಟದ ಹಲವು ಪ್ರಕರಣಗಳಿದ್ದು, ಅವುಗಳ ಇತ್ಯರ್ಥಕ್ಕೆ ಅದಾಲತ್ನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಬ್ಯಾಂಕ್ ಪ್ರಕರಣಗಳಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲದ ಪ್ರಕರಣ ರಾಜಿ ಸಂಧಾನಕ್ಕೆ ಮುಂದೆ ಬರಬೇಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಇತ್ಯರ್ಥವಾದರೆ ಅದಾಲತ್ ಉದ್ದೇಶ ಯಶಸ್ವಿಯಾಗುತ್ತದೆ ಎಂದರು.
ಪುತ್ತೂರು ನ್ಯಾಯಾಧೀಶರಾದ ದೇವರಾಜ್ ವೈ.ಎಚ್., ಆರ್.ರಮ್ಯಾ ವೇದಿಕೆಯಲ್ಲಿದ್ದರು. ಪುತ್ತೂರು ತಹಶೀಲ್ದಾರ್ ಎಸ್.ಬಿ.ಕೂಡಲಗಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ನಗರಸಭಾ ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್, ಪಿಎಸ್ಐ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.


































