Home ಮುಖಪುಟ ಸುದ್ದಿ ಅಭಿವೃದ್ಧಿ ಕಾರ್ಯಕ್ಕೆ ಒತ್ತು: ಪರಂ

ಅಭಿವೃದ್ಧಿ ಕಾರ್ಯಕ್ಕೆ ಒತ್ತು: ಪರಂ

ತುಮಕೂರು, ಜೂ. ೭- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿದ್ದು, ತ್ವರಿತಗತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ನೂತನ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ತಿಳಿಸಿದರು.


ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಅಧಿಕಾರ ಸ್ವೀಕರಿಸಿ ೪ ದಿನ ಆಗಿದೆ. ಅವರದೇ ಆದಂತಹ ರೀತಿಯಲ್ಲ ಅನೇಕ ಭರವಸೆ ಮಾತನ್ನು ಅನುಷ್ಠಾನ ಮಾಡಲು ಈಗಾಗಲೇ ನೀಲಿ ನಕ್ಷೆಯನ್ನು ಸಿದ್ದಪಡಿಸಿಕೊಂಡಿದ್ದಾರೆ. ನಾವೆಲ್ಲಾ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ತ್ವರಿತ ರೀತಿಯಲ್ಲಿ ಆಗುವಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.


ನನಗೆ ಈಗ ಉಪಮುಖ್ಯಮಂತ್ರಿ ಹುದ್ದೆ ಜತೆಗೆ ಕಂದಾಯ ಇಲಾಖೆಯ ಜವಾಬ್ದಾರಿ ಸಹ ದೊರೆತಿದೆ. ಕಂದಾಯ ಇಲಾಖೆಯಲ್ಲಿ ಪ್ರತಿಯೊಬ್ಬ ರೈತನಿಗೂ ಭೂಮಿ ಹಕ್ಕು ಬಹಳ ಮುಖ್ಯ. ನಮ್ಮ ರಾಜ್ಯದಲ್ಲಿ ಸುಮಾರು ೯೭ ಲಕ್ಷಕ್ಕೂ ಅಧಿಕ ರೈತರಿದ್ದಾರೆ. ಅವರಿಗೆ ಅನೇಕ ಸಮಸ್ಯೆಗಳಿವೆ. ಅನೇಕ ಮಂದಿಗೆ ಭೂಮಿಯ ಒಡೆತನ ಕೂಡ ಸಿಕ್ಕಿಲ್ಲ. ನನ್ನದೇ ಭೂಮಿ ಎಂಬ ಹಕ್ಕನ್ನು ಕೊಡುವ ಕೆಲಸ ಆಗಬೇಕಾಗಿದೆ ಎಂದರು.


ಕಂದಾಯ ಇಲಾಖೆಯಲ್ಲಿ ಅನೇಕ ಸಮಸ್ಯೆಗಳು ಸಹ ಇವೆ. ಅವುಗಳಿಗೆ ಪರಿಹಾರ ಒದಗಿಸುವ ಕೆಲಸವನ್ನು ಮಾಡಬೇಕಾಗಿದೆ. ಅಲ್ಲದೆ ಸಿಬ್ಬಂದಿಗಳಿಗೆ ಬಡ್ತಿ, ನೇಮಕಾತಿ ಸಮಸ್ಯೆಗಳೂ ಇವೆ. ಎಲ್ಲವನ್ನು ಆದ್ಯತೆ ಮೇರೆಗೆ ಬಗೆಹರಿಸುವ ಕೆಲಸ ಮಾಡುವುದಾಗಿ ಹೇಳಿದರು.


ನಮ್ಮ ಜಿಲ್ಲೆಯಲ್ಲೂ ಅನೇಕ ಜ್ವಲಂತ ಸಮಸ್ಯೆಗಳಿವೆ. ಕುಡಿಯುವ ನೀರಿನ ಸಮಸ್ಯೆ, ನೀರಾವರಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದ ಅವರು, ಅರಣ್ಯ ಇಲಾಖೆಯಿಂದಲೂ ಸಮಸ್ಯೆಯಾಗಿದೆ. ಇದನ್ನು ಸಹ ಬಗೆಹರಿಸುವ ಕೆಲಸ ಆದಷ್ಟು ಶೀಘ್ರವಾಗಿ ಮಾಡಬೇಕಾಗಿದೆ ಎಂದು ಹೇಳಿದರು.


ಸಂಪ್ರದಾಯದಂತೆ ಯಾವುದೇ ಶುಭ ಕಾರ್ಯ ಮಾಡುವಾಗ ಶ್ರೀಮಠಕ್ಕೆ ಭೇಟಿ ಕೊಡುವಂತಹದ್ದು ನಮ್ಮ ಸಂಪ್ರದಾಯ. ಹಾಗಾಗಿ ನಾನು ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ತುಮಕೂರಿಗೆ ಬಂದಿದ್ದು, ಶ್ರೀಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ, ಹಿರಿಯ ಶ್ರೀಗಳಾದ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದಿದ್ದೇನೆ. ಇದು ನಮ್ಮೆಲ್ಲರಿಗೂ ಸಿಗುವಂತಹ ಅವಕಾಶ. ಬೇರೆ ಜಿಲ್ಲೆಗಳಲ್ಲಿ, ಊರುಗಳಲ್ಲಿ ಇಂತಹ ಅವಕಾಶ ಸಿಗುವುದಿಲ್ಲ. ನಮ್ಮ ಇಡೀ ಕುಟುಂಬ ಸಿದ್ದಗಂಗಾ ಮಠಕ್ಕೆ ನಡೆದುಕೊಳ್ಳುತ್ತೇವೆ ಎಂದರು.


ಶ್ರೀಗಳೊಂದಿಗೆ ಚರ್ಚೆ
ಇದಕ್ಕೂ ಮುನ್ನ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಗೆ ಫುಲತಾಂಬೂಲ ನೀಡಿ ಆಶೀರ್ವಾದ ಪಡೆದರು. ಶ್ರೀಗಳು ಸಹ ಪರಮೇಶ್ವರ್ ರವರನ್ನು ಅಭಿನಂದಿಸಿ ಆಶೀರ್ವದಿಸಿದರು.


ನಂತರ ಡಾ. ಜಿ. ಪರಮೇಶ್ವರ್ ಮತ್ತು ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಕೆಲ ಹೊತ್ತು ಸಮಾಲೋಚನೆ ನಡೆಸಿದರು. ಇದಾದ ಬಳಿಕ ಪರಮೇಶ್ವರ್ ರವರು ಶ್ರೀಮಠದಲ್ಲೇ ಉಪಹಾರ ಸೇವಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

(ಪೊಟೋ-೨೯)