
ಕಮಲನಗರ:ಜೂ.7: ತಾಲ್ಲೂಕಿನ ಡೋಣಗಾಂವ(ಎಂ) ಗ್ರಾಮದಿಂದ ಕಮಲನಗರಕ್ಕೆ ಹೋಗುವಾಗ ಮುಖ್ಯ ರಸ್ತೆಯಲ್ಲಿರುವ ಡೋಣಗಾಂವ (ಎಂ)-ಕೋಟಗ್ಯಾಳ ಗ್ರಾಮದ ರಸ್ತೆಯ ಮಧ್ಯೆ ದೊಡ್ಡ ಪ್ರಮಾಣದಲ್ಲಿ ಮರ ಒಂದು ಉರುಳಿ ಬಿದ್ದಿದೆ. ವಾಹನ ಸವಾರರು ಭಯದಲ್ಲೇ ಸಂಚರಿಸುತ್ತಿದ್ದಾರೆ.
ಈ ಭಾಗದ ಜನ ನಿತ್ಯ ಇದೇ ಮಾರ್ಗವಾಗಿ ಹೋಗಬೇಕು. ಆದರೆ ಎಂಟು ದಿನಗಳ ಹಿಂದೆ ಬಿರುಗಾಳಿ ಮಳೆಯಿಂದ ಮರ ರಸ್ತೆ ಮೇಲೆ ಬಿದ್ದುದ್ದರಿಂದ ಸಂಪರ್ಕ ಕಡಿತಗೊಳ್ಳುತ್ತದೆ. ಅಲ್ಲದೇ ರಾತ್ರಿಯ ಸಮಯದಲ್ಲಿ ಕಾಣಿಸದೆ ಭಯದಲ್ಲೇ ದಿನಗಳನ್ನು ಕಳೆಯುವಂತಾಗಿದೆ ಎಂದು ವಾಹನ ಸವಾರರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ರಸ್ತೆ ಮೇಲೆ ರಾತ್ರಿ ಸಮಯದಲ್ಲಿ ವಾಹನಗಳು ಚಲಿಸುವಾಗ ಆತಂಕ ಕಾಡುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ರಸ್ತೆ ಮೇಲೆ ಬಿದ್ದಿರುವ ಮರವನ್ನು ಕೂಡಲೇ ಸಂಬಂಧಿತ ಅಧಿಕಾರಿಗಳು ಎಚ್ಚೆತ್ತುಕೊಂಡು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


























