Home Lead News ಸಚಿವ ಸ್ಥಾನ ತ್ಯಜಿಸಿದ ರೆಡ್ಡಿ

ಸಚಿವ ಸ್ಥಾನ ತ್ಯಜಿಸಿದ ರೆಡ್ಡಿ

ಬೆಂಗಳೂರು, ಜೂ. ೫- ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದಿದ್ದಕ್ಕೆ ಬೇಸತ್ತು ಸಚಿವ ಸ್ಥಾನಕ್ಕೆ ನಿನ್ನೆಯೇ ರಾಜೀನಾಮೆ ನೀಡಿದ್ದ ಆರ್. ರಾಮಲಿಂಗಾರೆಡ್ಡಿ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಅಧಿಕೃತವಾಗಿ ಪ್ರಕಟಿಸಿದರು.


ಬೆಂಗಳೂರಿನ ಕೋರಮಂಗಲದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದನ್ನು ಪ್ರಕಟಿಸಿ ರಾಜೀನಾಮೆ ಪತ್ರವನ್ನು ಪ್ರದರ್ಶಿಸಿದರು.


ಸಚಿವ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದಲ್ಲಿ ಕೆಲಸ ಮಾಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿರುವ ಅವರು, ತಮ್ಮ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದಕ್ಕೆ ತಮಗೂ, ಕಾಂಗ್ರೆಸ್ ಪಕ್ಷಕ್ಕೂ ಧನ್ಯವಾದಗಳು. ಆತ್ಮಸಾಕ್ಷಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಕೋರುತ್ತಿದ್ದೇನೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.


ನಾನು ಶಾಸಕನಾಗಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಮುಂದುವರೆಯುತ್ತೇನೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.


ಡಿ.ಕೆ. ಶಿವಕುಮಾರ್ ಸಚಿವ ಸಂಪುಟದ ೧೩ ಸಚಿವರು ಬುಧವಾರವಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದರು. ನಿನ್ನೆ ಸಚಿವರುಗಳಿಗೆ ಖಾತೆ ಹಂಚಿಕೆಯಾಗಿತ್ತು. ಖಾತೆ ಹಂಚಿಕೆಗೆ ಮೊದಲೇ ಬೆಳಿಗ್ಗೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ಭೇಟಿ ಮಾಡಿದ ರಾಮಲಿಂಗಾರೆಡ್ಡಿಯವರು ನನಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಿ, ಇಲ್ಲದಿದ್ದರೆ ನನ್ನ ರಾಜೀನಾಮೆಯನ್ನು ಅಂಗೀಕರಿಸಿ ಎಂದು ರಾಜೀನಾಮೆ ಪತ್ರವನ್ನು ಡಿ.ಕೆ. ಶಿವಕುಮಾರ್ ರವರಿಗೆ ನೀಡಿದ್ದರಾದರೂ ಡಿ.ಕೆ. ಶಿವಕುಮಾರ್ ರವರು ಅದನ್ನು ಪರಿಗಣಿಸದೆ ರಾಮಲಿಂಗಾರೆಡ್ಡಿಯವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಬದಲು ಜಲಸಂಪನ್ಮೂಲ ಖಾತೆ ನೀಡಿದ್ದರು. ಇದರಿಂದ ಅಸಮಾಧಾನಗೊಂಡ ರಾಮಲಿಂಗಾರೆಡ್ಡಿಯವರು ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಅಧಿಕೃತವಾಗಿ ಪ್ರಕಟಿಸಿದರು.

ಮುಖ್ಯಮಂತ್ರಿಗಳ ಕಚೇರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿ ಕೊಡುತ್ತೇನೆ ಎಂದು ಅವರು ಹೇಳಿ, ಸುದ್ದಿಗೋಷ್ಠಿಯಲ್ಲೇ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದರು.
ನಾನು ೧೯೭೩ ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಬಂದೆ. ಕಾಂಗ್ರೆಸ್ ಎನ್‌ಎಸ್‌ಯುನಲ್ಲಿ ಕೆಲಸ ಮಾಡಿದ್ದೇನೆ. ನಂತರ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದೆ. ವೀರಪ್ಪಮೊಯ್ಲಿ ಅವರು ನನ್ನನ್ನು ಸಚಿವನನ್ನಾಗಿ ಮಾಡಿದರು. ೬ ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಇದುವರೆಗೂ ಯಾರ ಬಳಿಯೂ ಇಂತಹದ್ದೇ ಖಾತೆ ಕೊಡಿ ಎಂದು ನಾನು ಲಾಬಿ ಮಾಡಿಲ್ಲ ಎಂದರು.

೨ ವರ್ಷಗಳ ಹಿಂದೆ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಹೋದರ ಡಿ.ಕೆ. ಸುರೇಶ್ ಅವರು ನನ್ನ ಬಳಿಕ ನಿಮಗೆ ಬೆಂಗಳೂರು ಖಾತೆ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಅವರು ಮಾತು ಕೊಟ್ಟಂತೆ ನನಗೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಟ್ಟಿಲ್ಲ. ಹಾಗಾಗಿ ರಾಜೀನಾಮೆ ಕೊಡುತ್ತಿದ್ದೇನೆ ಎಂದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೂ ನಾನು ಶಾಸಕನಾಗಿ, ಪಕ್ಷದ ಕಾರ್ಯಕರ್ತನಾಗಿ ಇರುತ್ತೇನೆ. ನನಗೆ ಯಾರ ಮೇಲೂ ಕೋಪ ಇಲ್ಲ. ೩೭ ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ನಾನು ಯಾವತ್ತೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ, ದೆಹಲಿಗೂ ಹೋಗಿಲ್ಲ ಎಂದು ಅವರು ಹೇಳಿದರು.ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿಯವರು ರಾಜೀನಾಮೆ ನೀಡಿರುವ ಪತ್ರವನ್ನು ಅವರ ಆಪ್ತ ಮಾವಳ್ಳಿ ಸತ್ಯ ಅವರು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ರವರಿಗೆ ನೀಡಿ, ಪತ್ರ ನೀಡಿದ್ದಕ್ಕೆ ಹಿಂಬರಹವನ್ನು ಪಡೆದುಕೊಂಡರು.

ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ರವರು ಪ್ರಮಾಣ ವಚನ ಸ್ವೀಕರಿಸಿದ ದಿನವೇ ಅವರನ್ನು ಭೇಟಿ ಮಾಡಿದ್ದೆ. ನಾನು ಯಾರಿಗೂ ಮಂತ್ರಿ ಮಾಡಿ ಎಂದು ಕೇಳಿರಲಿಲ್ಲ. ನನ್ನ ಪಕ್ಷ ಸೇವೆಯ ನಿಷ್ಠೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ನೀಡಿದ್ದರು. ನಾನು ಬೆಂಗಳೂರು ಅಭಿವೃದ್ಧಿ ಖಾತೆ ಕೇಳಿದ್ದೆ. ಆದರೆ ಜಲಸಂಪನ್ಮೂಲ ಖಾತೆ ನೀಡಿದ್ದಾರೆ ಎಂದು ಅವರು ಹೇಳಿದರು.

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿಯವರು ರಾಜೀನಾಮೆ ನೀಡಿದ್ದ ವರದಿಯನ್ನು ಸಂಜೆವಾಣಿ ನಿನ್ನೆ ಮೊದಲು ವರದಿ ಮಾಡಿತ್ತು.

ನಿನ್ನೆಯೇ ರಾಜೀನಾಮೆ


ಖಾತೆ ಹಂಚಿಕೆಗೂ ಮೊದಲೇ ನಿನ್ನೆ ಬೆಳಿಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ಭೇಟಿ ಮಾಡಿದ್ದ ರಾಮಲಿಂಗಾರೆಡ್ಡಿಯವರು ನನಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಿ, ಇಲ್ಲವಾದರೆ ನನ್ನ ರಾಜೀನಾಮೆ ಪತ್ರೆ ತೆಗೆದುಕೊಳ್ಳಿ ಎಂದು ರಾಜೀನಾಮೆ ಪತ್ರವನ್ನು ಡಿ.ಕೆ. ಶಿವಕುಮಾರ್ ರವರಿಗೆ ನೀಡಿದ್ದರು.
ಇದಾದ ಬಳಿಕ ಡಿ.ಕೆ. ಶಿವಕುಮಾರ್ ರವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ನಿನ್ನೆ ಮಧ್ಯಾಹ್ನ ರಾಮಲಿಂಗಾರೆಡ್ಡಿಯವರ ಜತೆ ಚರ್ಚಿಸಿ ಜಲಸಂಪನ್ಮೂಲ ಖಾತೆ ಒಪ್ಪಿಕೊಳ್ಳುವಂತೆ ಮನವೊಲಿಸುವ ಕೆಲಸ ಮಾಡಿದ್ದರಾದರೂ ಅದಕ್ಕೆ ರಾಮಲಿಂಗಾರೆಡ್ಡಿಯವರು ಒಪ್ಪಿರಲಿಲ್ಲ.


ರಾಮಲಿಂಗಾರೆಡ್ಡಿಯವರು ಬೆಂಗಳೂರು ಅಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿದ್ದರೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಬದಲು ಜಲಸಂಪನ್ಮೂಲ ಖಾತೆ ನೀಡಿದ್ದರು. ಇದರಿಂದ ಅಸಮಾಧಾನಗೊಂಡ ರಾಮಲಿಂಗಾರೆಡ್ಡಿಯವರು ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಸಚಿವ ಸ್ಥಾನ ತ್ಯಜಿಸುತ್ತಿರುವುದಾಗಿ ಅಧಿಕೃತವಾಗಿ ಹೇಳಿದ್ದರು.

ರಾಮಲಿಂಗಾರೆಡ್ಡಿ ಜತೆ ಮಾತನಾಡುತ್ತೇನೆ: ಬಿಕೆಹೆಚ್


ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿಯವರ ಜತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.


ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಿಂಗಾರೆಡ್ಡಿಯವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರು ಪಕ್ಷಕ್ಕೆ ಹಾನಿಯಾಗುವ ಯಾವ ಕೆಲಸವನ್ನು ಮಾಡುವುದಿಲ್ಲ. ಅವರ ಜತೆ ಮಾತನಾಡಿ ಎಲ್ಲವನ್ನೂ ಸರಿ ಮಾಡುತ್ತೇನೆ ಎಂದರು.


ರಾಜಕಾರಣದಲ್ಲಿ ಇಂತಹವುದೆಲ್ಲಾ ಆಗುತ್ತಲೇ ಇರುತ್ತವೆ. ನಾನು ನಾಳೆ ಅವರ ಜತೆ ಮಾತನಾಡುತ್ತೇನೆ. ಮನಸ್ತಾಪ ಇದ್ದರೆ ಬಗೆಹರಿಸುವುದಾಗಿಯೂ ಅವರು ಹೇಳಿದರು.


ರಾಜಕಾರಣ ಎಂದ ಮೇಲೆ ಇಂತಹುಗಳೆಲ್ಲಾ ಇದ್ದೇ ಇರುತ್ತವೆ. ಮುನಿಸು, ಮನಸ್ತಾಪ ಎಲ್ಲವನ್ನು ಬಗೆಹರಿಸಲಾಗುವುದು. ನಾನು, ಮುಖ್ಯಮಂತ್ರಿ ಎಲ್ಲರೂ ಸೇರಿ ರಾಮಲಿಂಗಾರೆಡ್ಡಿಯವರ ಜತೆ ಮಾತನಾಡುತ್ತೇವೆ ಎಂದು ಅವರು ತಿಳಿಸಿದರು.
ಅಧಿಕಾರ ಬೇಕಾದವರು ಡಿಕೆಶಿ ಜತೆ ಹೋಗಲಿ, ಪಕ್ಷ ಕಟ್ಟಬೇಕು ಎನ್ನುವವರು ನನ್ನ ಜತೆ ಬರಲಿ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಒಳಗಾಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಗೋಧಿ ಮೀಡಿಯಾದವರು ಇಂತಹ ಗೊಂದಲ ಸೃಷ್ಠಿಸುವ ಕೆಲಸ ಮಾಡಿದ್ದಾರೆ, ಮಾಡಲಿ. ನಾವು ಇನ್ನು ಮುಂದೆ ಮೀಡಿಯಾದವರ ಜತೆ ಹೇಗಿರಬೇಕೋ ಹಾಗೆ ಇರುತ್ತೇವೆ ಎಂದು ಹೇಳಿದರು.

ರೆಡ್ಡಿಯವರ ಜೊತೆ ಮಾತನಾಡುವೆ:ಡಿಕೆಶಿ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿಯವರ ಜೊತೆ ಮಾತನಾಡಿ ಎಲ್ಲವನ್ನು ಬಗೆಹರಿಸಿಕೊಳ್ಳುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಮಲಿಂಗಾರೆಡ್ಡಿ ಅವರು ನನ್ನ ಒಳ್ಳೆಯ ಸ್ನೇಹಿತರು ಮೇಲಾಗಿ ಪಕ್ಷದ ಪ್ರಮುಖ ನಾಯಕರಾಗಿದ್ದು ಅವರ ಜೊತೆ ಮಾತನಾಡುತ್ತೇನೆ ಎಂದರು. ರಾಮಲಿಂಗಾರೆಡ್ಡಿ ಅವರು ಗ್ರಾಮೀಣ ಭಾಗದಿಂದ ಬಂದವರಲ್ಲ ನಗರ ಪ್ರದೇಶದವರು ಅವರು ಮೊದಲಿನಿಂದಲೂ ನಗರ ಪ್ರದೇಶದ ಜನರ ಕಲ್ಯಾಣಕ್ಕೆ ಕೆಲಸ ಮಾಡಿದ್ದಾರೆ ಎಲ್ಲವನ್ನು ಎಲ್ಲವೂ ನಮ್ಮ ಗಮನದಲ್ಲಿದೆ ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು. ರಾಮಲಿಂಗಾರೆಡ್ಡಿಯವರ ಜೊತೆ ಅವರ ಕೆಲ ಬೆಂಬಲಿಗರು ರಾಜೀನಾಮೆ ನೀಡಲು ಮುಂದಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಕ್ಷದಲ್ಲಿ ಶಿಸ್ತು ಮುಖ್ಯ ಎಂದರು.