Home ಮುಖಪುಟ ಸುದ್ದಿ ಡಿಸಿಎಂ ಹುದ್ದೆ ಸೃಷ್ಟಿ ನಿರ್ಧಾರವಾಗಿಲ್ಲ

ಡಿಸಿಎಂ ಹುದ್ದೆ ಸೃಷ್ಟಿ ನಿರ್ಧಾರವಾಗಿಲ್ಲ

ಬೆಂಗಳೂರು, ಮೇ ೩೧- ರಾಜ್ಯದಲ್ಲಿ ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸುವ ಬಗ್ಗೆ ಯಾವುದೇ ನಿರ್ಧಾರಗಳನ್ನು ಸದ್ಯಕ್ಕೆ ಕೈಗೊಂಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.


ಕಲ್ಬುರ್ಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಹಂತಗಳಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ. ಉಪಮುಖ್ಯಮಂತ್ರಿ ಹುದ್ದೆಗಳ ಸೃಜನೆ ಸಂಬಂಧ ಯಾವುದೇ ಅಧಿಕೃತ ಪ್ರಸ್ತಾವನೆ ಬಂದಿಲ್ಲ. ಜೂನ್ ೩ ರ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.


ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆಗೆ ಮೊದಲ ಹಂತದಲ್ಲಿ ಎಷ್ಟು ಸಚಿವರು ಪ್ರಮಾಣ ವಚನ ಸ್ವೀಕರಿಸಬೇಕು ಎಂಬುದು ಇನ್ನೆರಡು ದಿನಗಳಲ್ಲಿ ಎಲ್ಲವೂ ಅಂತಿಮಗೊಳ್ಳಲಿದೆ ಎಂದರು.


ಮೊದಲ ಹಂತದ ಸಂಪುಟ ವಿಸ್ತರಣೆ ಮುಗಿದ ಬಳಿಕ ೧೫ ದಿನಗಳ ಒಳಗೆ ೨ನೇ ಹಂತದ ಸಂಪುಟ ವಿಸ್ತರಣೆಯಾಗಲಿದೆ. ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ಹೇಳಿದರು.


ಒಂದು ವೇಳೆ ಡಿಸಿಎಂ ಹುದ್ದೆಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳು ಬಂದರೆ ಎಷ್ಟು ಜನರನ್ನು ಉಪಮುಖ್ಯಮಂತ್ರಿಗಳನ್ನಾಗಿಸಬೇಕು ಎಂಬ ಬಗ್ಗೆ ಇನ್ನು ತೀರ್ಮಾನವಾಗಿಲ್ಲವಾದರೂ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗಳಾಗಿವೆ. ಜೂನ್ ೩ ರ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.


ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೊಸ ಮುಖ್ಯಮಂತ್ರಿ ಬಳಿಕ ಸಹಜವಾಗಿಯೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆಯು ನಡೆಯುತ್ತದೆ. ಅಧಿಕಾರ ಹಂಚಿಕೆಯ ಭಾಗವಾಗಿ ಕೆಪಿಸಿಸಿಗೂ ಹೊಸ ಅಧ್ಯಕ್ಷರ ನೇಮಕವಾಗುತ್ತಾರೆ. ಸರ್ಕಾರದ ಸುಗಮ ಆಡಳಿತಕ್ಕಾಗಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ನಡುವೆ ಉತ್ತಮ ಹೊಂದಾಣಿಕೆ ಅವಶ್ಯವಿದೆ ಎಂದರು.


ಮುಖ್ಯಮಂತ್ರಿ ಮತ್ತು ಸಚಿವರುಗಳು ಜೊತೆಗೆ ಹೊಂದಾಣಿಯಿಂದ ಹೋಗುವಂತಹ ಹಾಗೂ ಪಕ್ಷ ಸಂಘಟನೆಗೆ ಶಕ್ತಿ ಇರುವ ತಳಮಟ್ಟದಲ್ಲಿ ವ್ಯಾಪಕ ಜನ ಬೆಂಬಲ ಹೊಂದಿರುವವರನ್ನು ಮುಂದಿನ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.