Home ಮುಖಪುಟ ಸುದ್ದಿ ಭೀಕರ ಅಪಘಾತ:ಒಂದೇ ಕುಟುಂಬದ ಐವರ ಸಾವು

ಭೀಕರ ಅಪಘಾತ:ಒಂದೇ ಕುಟುಂಬದ ಐವರ ಸಾವು

ಚಿತ್ತಾಪುರ,ಮೇ ೨೩: ಕ್ರೂಸರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ಐವರು ದುರ್ಮರಣಕ್ಕೀಡಾದ ಘಟನೆ ತಡರಾತ್ರಿ ಚಿತ್ತಾಪುರ ತಾಲೂಕಿನ ವಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ-೧೫೦ ರಲ್ಲಿ ನಡೆದಿದೆ.


ಮಹ್ಮದ್ ಹುಸೇನ್ (೬೦), ಫಾತಿಮಾ ಅಬ್ದುಲ್ ಸಾಬ್ (೪೦), ರಸೂಲ್ ಬೀ (೪೦), ಮಹೆಬೂಬ್ ಸಂಗಾವಿ (೩೭), ಕ್ರೂಸರ್ ಚಾಲಕ ತೋಲು ಪಾಷಾ (೨೪) ಮೃತಪಟ್ಟ ದುರ್ದೈವಿಗಳು. ಮೃತರೆಲ್ಲರೂ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ನಿವಾಸಿಗಳಾಗಿದ್ದಾರೆ.


ಮಹ್ಮದ್ ಅಬ್ದುಲ್ ಸಾಬ್ ಎಂಬ ಯುವಕ ರಾತ್ರಿ ವೇಳೆ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಎನ್ನಲಾಗಿದ್ದು, ರೋಗಿಯನ್ನು ಯಾದಗಿರಿ ನಗರದ ಆಸ್ಪತ್ರೆಗೆ ದಾಖಲಿಸಲು ೮ ಜನರು ಕ್ರೂಸರ್ ವಾಹನದಲ್ಲಿ ಹೋಗಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸಿ ವಾಪಸ್ ಊರಿಗೆ ಬರುವಾಗ ಚಾಲಕ ಸೇರಿ ವಾಹನದಲ್ಲಿ ಐವರು ಮಾತ್ರ ಇದ್ದರು. ರಾತ್ರಿ ೧೧.೪೦ ರ ಸುಮಾರಿಗೆ ಲಾಡ್ಲಾಪುರ ಸಮೀಪ ಬಂದಾಗ ಎದುರಿಗೆ ಬರುತ್ತಿದ್ದ ತಮಿಳುನಾಡು ಮೂಲದ ಲಾರಿ ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕ್ರೂಸರನಲ್ಲಿದ್ದ ಐವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಕ್ರೂಸರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್ಪಿ ಶಂಕರಗೌಡ ಪಾಟೀಲ, ಚಿತ್ತಾಪುರ ಸಿಪಿಐ ಸಿ.ಎಸ್.ಪಾಟೀಲ, ವಾಡಿ ಠಾಣೆಯ ಪಿಎಸ್‌ಐ ಕೆ.ತಿರುಮಲೇಶ, ರೇಣುಕಾ ಉಡಗಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ವಾಡಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಅಪಘಾತದ ಸುದ್ದಿಯು ಮನಸಿನಲ್ಲಿ ತಲ್ಲಣವನ್ನುಂಟುಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದು ಅಮೂಲ್ಯ ಜೀವಗಳು ಅಪಘಾತಕ್ಕೆ ಬಲಿಯಾಗಿರುವುದರ ಬಗ್ಗೆ ನೋವು ವ್ಯಕ್ತಪಡಿಸಿ, ” ಭಾರವಾದ ಮನಸ್ಸಿನಿಂದಲೇ ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ, ಮೃತರ ಕುಟುಂಬ ವರ್ಗವು ಧೈರ್ಯ ತಂದುಕೊಳ್ಳಬೇಕು ಎಂದಷ್ಟೇ ಈಗ ಹೇಳಬಹುದಾದ ಸಮಾಧಾನದ ಮಾತುಗಳು” ಎಂದು ಪ್ರಿಯಾಂಕ್ ಹೇಳಿದ್ದಾರೆ.


” ಈ ಕುರಿತು ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಮಾತನಾಡಿದ್ದೇನೆ, ನಾನು ಮತ್ತು ಜಿಲ್ಲಾಡಳಿತವು ಮೃತರ ಕುಟುಂಬದವರ ಅಗತ್ಯ ನೆರವಿಗೆ ಪೂರ್ಣ ಸಹಕಾರ ನೀಡಲಿದ್ದೇವೆ. ಪ್ರೀತಿಪಾತ್ರರ ಅಗಲಿಕೆ ಭರಿಸುವ ಶಕ್ತಿ ಮೃತರ ಕುಟುಂಬ ವರ್ಗಕ್ಕೆ ಸಿಗುವಂತಾಗಲಿ ಎಂದು ಆಶಿಸುತ್ತೇನೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.