Home ಮುಖಪುಟ ಸುದ್ದಿ ಎಬೋಲಾ ಆತಂಕ: ರಾಜ್ಯದಲ್ಲಿ ಕಟ್ಟೆಚ್ಚರ

ಎಬೋಲಾ ಆತಂಕ: ರಾಜ್ಯದಲ್ಲಿ ಕಟ್ಟೆಚ್ಚರ

ಬೆಂಗಳೂರು, ಮೇ.೨೩-ಆಫ್ರಿಕಾದ ಕೆಲವು ದೇಶಗಳಲ್ಲಿ ವೇಗವಾಗಿ ಹರಡುತ್ತಿರುವ ಭೀಕರ ಎಬೋಲಾ ವೈರಸ್ ಸೋಂಕಿನ ಹಿನ್ನೆಲೆ, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಸೋಂಕು ಭಾರತಕ್ಕೆ ಕಾಲಿಡದಂತೆ ತಡೆಯಲು ವಿಮಾನ ನಿಲ್ದಾಣಗಳು, ಬಂದರುಗಳು ಹಾಗೂ ಇತರ ಪ್ರವೇಶ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ.


ಎಬೋಲಾ ಸೋಂಕು ಮೇ ೧೭ರಂದು ಕಾಂಗೋ ಮತ್ತು ಉಗಾಂಡಾದಲ್ಲಿ ಕಾಣಿಸಿಕೊಂಡಿರುವ “ಬಂಡಿಬುಗ್ಯೋ” ತಳಿಯ ಎಬೋಲಾ ಸೋಂಕನ್ನು “ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ” ಎಂದು ಘೋಷಿಸಿದೆ.


ಭಾರತದಲ್ಲಿ ಸದ್ಯಕ್ಕೆ ಯಾವುದೇ ಪ್ರಕರಣ ಇಲ್ಲ ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ, ಭಾರತದಲ್ಲಿ ಅಥವಾ ಕರ್ನಾಟಕದಲ್ಲಿ ಇದುವರೆಗೆ ಎಬೋಲಾ ಸೋಂಕಿನ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಆದರೂ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ.


ಬೆಂಗಳೂರು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆಫ್ರಿಕಾ ದೇಶಗಳಿಂದ ಆಗಮಿಸುವ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಶಂಕಿತ ಲಕ್ಷಣಗಳು ಕಂಡುಬಂದರೆ ತಕ್ಷಣ ಪ್ರತ್ಯೇಕ ವಾರ್ಡ್‌ಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ.


ಆಸ್ಪತ್ರೆಗಳಲ್ಲಿ ವಿಶೇಷ ಸಿದ್ಧತೆ


ಬೆಂಗಳೂರು ಮತ್ತು ಮಂಗಳೂರು ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್‌ಗಳು, ರಕ್ಷಣಾತ್ಮಕ ಕಿಟ್‌ಗಳು (PPಇ), ತುರ್ತು ವೈದ್ಯಕೀಯ ತಂಡಗಳು ಮತ್ತು ಸೋಂಕು ನಿಯಂತ್ರಣ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಎಬೋಲಾ ಎಂದರೇನು?


ಎಬೋಲಾ ಒಂದು ತೀವ್ರ ಹಾಗೂ ಬಹುಪಾಲು ಮಾರಣಾಂತಿಕ ವೈರಲ್ ಹೆಮರಾಜಿಕ್ ಜ್ವರವಾಗಿದೆ. ಸೋಂಕಿತ ವ್ಯಕ್ತಿಯ ರಕ್ತ, ಲಾಲಾರಸ, ಬೆವರು, ವಾಂತಿ, ಕಫ ಅಥವಾ ಇತರ ದೇಹದ ದ್ರವಗಳೊಂದಿಗೆ ನೇರ ಸಂಪರ್ಕದಿಂದ ಈ ಸೋಂಕು ಹರಡುತ್ತದೆ. ಸೋಂಕಿತ ವ್ಯಕ್ತಿ ಬಳಸಿದ ಬಟ್ಟೆ, ಹಾಸಿಗೆ, ಸೂಜಿ ಮತ್ತು ವೈದ್ಯಕೀಯ ಉಪಕರಣಗಳ ಮೂಲಕವೂ ಹರಡುವ ಸಾಧ್ಯತೆ ಇದೆ.


ಆದರೆ ಗಾಳಿಯ ಮೂಲಕ ಈ ಸೋಂಕು ಹರಡುವುದಿಲ್ಲ ಎಂದು ಆರೋಗ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಲಕ್ಷಣಗಳು:


ತೀವ್ರ ಜ್ವರ ಮತ್ತು ತಲೆನೋವು
ಅತಿಯಾದ ಆಯಾಸ ಹಾಗೂ ಸ್ನಾಯು ನೋವು
ಗಂಟಲು ನೋವು
ವಾಂತಿ ಮತ್ತು ಅತಿಸಾರ
ಹೊಟ್ಟೆ ನೋವು
ಕಣ್ಣು ಕೆಂಪಾಗುವುದು ಮತ್ತು ದದ್ದುಗಳು
ಗಂಭೀರ ಪ್ರಕರಣಗಳಲ್ಲಿ ಆಂತರಿಕ ಹಾಗೂ ಬಾಹ್ಯ ರಕ್ತಸ್ರಾವ.

ಸಾರ್ವಜನಿಕರಿಗೆ ಅರೋಗ್ಯ ಇಲಾಖೆ ಸಲಹೆ:


ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಆತಂಕ ಪಡುವ ಅಗತ್ಯವಿಲ್ಲ, ಆದರೆ ಎಚ್ಚರಿಕೆ ಅಗತ್ಯ ಎಂದು ಮನವಿ ಮಾಡಿದೆ. ಸೋಂಕು ಪೀಡಿತ ದೇಶಗಳಿಗೆ ಅನಾವಶ್ಯಕ ಪ್ರಯಾಣ ತಪ್ಪಿಸುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದು ಮತ್ತು ಜ್ವರ ಅಥವಾ ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.


ಪ್ರಸ್ತುತ ಕಾಂಗೋ ಮತ್ತು ಉಗಾಂಡಾದಲ್ಲಿ ಸೋಂಕಿನ ಪ್ರಕರಣಗಳು ವೇಗವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ Wಊಔ ಜಾಗತಿಕ ಮಟ್ಟದಲ್ಲಿ ನಿಗಾ ವಹಿಸಿದೆ.