Home ಜಿಲ್ಲೆ ಬಡ ಮಕ್ಕಳಿಗೆ ಉತ್ತಮ ವಸತಿ ಸೌಲಭ್ಯ ಸರ್ಕಾರದ ಆದ್ಯತೆ : ಶಾಸಕ ಲಕ್ಷ್ಮಣ ಸವದಿ

ಬಡ ಮಕ್ಕಳಿಗೆ ಉತ್ತಮ ವಸತಿ ಸೌಲಭ್ಯ ಸರ್ಕಾರದ ಆದ್ಯತೆ : ಶಾಸಕ ಲಕ್ಷ್ಮಣ ಸವದಿ

ಅಥಣಿ :ಮೇ.19: ಶಿಕ್ಷಣದಿಂದ ವಂಚಿತರಾದವರ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕೆಂಬುದು ನಮ್ಮ ಸರ್ಕಾರದ ಪ್ರಮುಖ ಧ್ಯೇಯವಾಗಿದ್ದು. ಆ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರ ಗುಣಮಟ್ಟದ ಶಿಕ್ಷಣದ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ಉದ್ದೇಶದಿಂದ ವಸತಿ ನಿಲಯಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ 2025-26 ನೇ ಸಾಲಿನ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ 1 ಕೋಟಿ ರೂ.ಗಳಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಅವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ತಾಲೂಕಿನ ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಅನೇಕ ಶಾಲೆಗಳನ್ನು ಮತ್ತು ವಸತಿ ಶಾಲೆಗಳನ್ನು ಸರ್ಕಾರದಿಂದ ಮಂಜೂರಾತಿ ಪಡೆದುಕೊಳ್ಳಲಾಗಿದೆ. ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಈ ವಸತಿ ನಿಲಯದಲ್ಲಿ ಮಕ್ಕಳಿಗೆ ಅಗತ್ಯ ಹೆಚ್ಚುವರಿ ಕೋಣೆಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗಿದೆ. ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಮುಗಿಸುವಂತೆ ಸೂಚನೆ ನೀಡಿದರು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಕಲ್ಪಿಸುವ ಭರವಸೆಯನ್ನು ಶಾಸಕರು ನೀಡಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್. ಸದಸ್ಯರಾದ ರಾಜಶೇಖರ ಗುಡೊಡಗಿ, ಮಲ್ಲಿಕಾರ್ಜುನ ಬುಟಾಳಿ, ರಾವಸಾಬ ಐಹೊಳೆ, ಮಲ್ಲೇಶ ಹುದ್ದಾರ, ಸಂತೋಷ ಸಾವಡಕರ, ಸಯ್ಯದಅಮೀನ ಗದ್ಯಾಳ, ಕಲ್ಲೇಶ್ ಮಡ್ಡಿ. ರಿಯಾಜ್ ಸನದಿ. ಪ್ರಮೋದ ಬಿಳ್ಳೂರ. ಉದಯ ಸೋಳಸಿ. ಮುಸ್ತಾಕ್ ಮುಲ್ಲಾ. ಶಶಿಕಾಂತ ಹುಲಕುಂದ. ಮುಖಂಡರಾದ ದಿಲೀಪ್ ಲೋಣಾರೆ. ರವಿ ಭಡಕಂಬಿ. ಬಾಬು ಖೇಮಲಾಪೂರ. ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಪರಶುರಾಮ ಪತ್ತಾರ, ಚಂದ್ರಕಾಂತ ಕಾಂಬಳೆ, ನಿಲಯ ಪಾಲಕ ರಾಜಶೇಖರ ಹಿರೇಮನಿ, ಕೆಆರ್‍ಡಿಎಲ್ ಜೆಇ ಸಂತೋಷ ಶೇಗುಣಸಿ, ಗಿರಿರಾಜ ಹೋಮಕರ, ಅಡಿವೆಪ್ಪ ಉಲ್ಲಾಗಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.