Home ಜಿಲ್ಲೆ ಕಲಬುರಗಿ ನರಿಬೋಳ್ ಚಾಮನೂರು ಸೇತುವೆ ಕಾಮಗಾರಿ 9 ತಿಂಗಳಲ್ಲಿ ಪೂರ್ಣ

ನರಿಬೋಳ್ ಚಾಮನೂರು ಸೇತುವೆ ಕಾಮಗಾರಿ 9 ತಿಂಗಳಲ್ಲಿ ಪೂರ್ಣ

ಕಲಬುರಗಿ,ಜೂ.9-ಜಿಲ್ಲೆಯ ಜೇವರ್ಗಿ ಮತ್ತು ಚಿತ್ತಾಪುರ ತಾಲ್ಲೂಕಿನ ಗಡಿ ಗ್ರಾಮಗಳ ಮಧ್ಯೆ ಸಂಪರ್ಕ ಕಲ್ಪಿಸುವ ಭೀಮಾ ನದಿಗೆ ಅಡ್ಡಲಾಗಿ ನಿರ್ಮಣ ಹಂತದಲ್ಲಿರುವ ಸೇತುವೆಯ ಬಾಕಿ ಕಾಮಗಾರಿ ಮಾಡಿ ಮುಗಿಸಲು 32 ಕೋಟಿ ರುಹೆಚ್ಚುವರಿ ಅನುದಾನ ಬಿಡುಗಡೆಯಾಗಿದೆ ಎಂದು ಕೆಕೆಆರ್‍ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಚಿತ್ತಾಪುರ ಹಾಗೂಜೇವರ್ಗಿ ತಾಲೂಕಿನ ನಡುವಿನ ಸಂಪರ್ಕ ಕೊಂಡಿಯಾಗಿರುವ ಹಾಗೂ ಈ ಭಾಗದ ಜನರ ಬಹು ದಶಕಗ ಕನಸಿನ ‘ನರಿಬೋಳ್- ಚಾಮನೂರು ಸೇತುವೆ’ ಕಾಮಗಾರಿ ಆರಂಭವಾಗಿ ಕಾರಣಾಂತರಗಲಿಂದ ಬಾಕಿ ಉಳಿದುಕೊಂಡಿತ್ತು. ಇದೀಗ ಈ ವಿಚಾರವಾಗಿ ಸದನದಲ್ಲಿ ಅನೇಕ ಬಾರಿ ಡಾ. ಅಜಯ್‍ಸಿಂಗ್ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದರು. ಹೀಗಾಗಿ ಕಾಮಗಾರಿ ಬಾಕಿ ಕೆಲಸ ಪೂರ್ಣಗೊಳಿಸಲು ಅಗತ್ಯವಿರುವ ಹೆಚ್ಚುವರಿ ಅನುದಾನ ಬಿಡುಗಡೆಗೆ ಲೋಕೋಪಯೋಗಿ ಇಲಾಖೆಯು ಮಂಜೂರಾತಿ ನೀಡಿದೆ.
ಇನ್ನೇನು ಸದರಿ ಬಾಕಿ ಕಾಮಗಾರಿ 6 ರಿಂದ 9 ತಿಂಗಳಲ್ಲಿ ಮಾಡಿ ಮುಗಿಸಲಾಗುತ್ತದೆ. ಅದಕ್ಕೆತಕ್ಕಂತೆ ಟೆಂಡರ್ ಪ್ರಕ್ರಿಯೆ ಕೂಡಾ ಶೀಘ್ರ ನಡೆಯಲಿದೆ ಎಂದು ಡಾ. ಅಜಯ್‍ಸಿಂಗ್ ಹೇಳಿದ್ದಾರೆ.
ಕೆಕೆಆರ್ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಧರ್ಮಸಿಂಗ್ ಅವರು ಸರ್ಕಾರದ ಮಟ್ಟದಲ್ಲಿ ನಡೆಸಿದ ಸತತವಾಗಿ ಪ್ರಯತ್ನದ ಫಲವಾಗಿ ಸ್ಥಗಿತವಾಗಿದ್ದ ಈ ಕಾಮಗಾರಿಗೆ ಅಗತ್ಯವಿರುವ ಹೆಚ್ಚುವರಿ ಮೊತ್ತಕ್ಕೆ ಅನುಮೋದನೆ ದೊರಕಿದೆ.
ವಿಳಂಬಕ್ಕೆ ಕಾರಣವಾಗಿದ್ದ ಭೂ ಸ್ವಾಧೀನ ಪ್ರಕ್ರಿಯೆ ಚುರುಕು; ಈ ಹಿಂದೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಉಂಟಾಗಿದ್ದ ತಾಂತ್ರಿಕ ಹಾಗೂ ಕಾನೂನಾತ್ಮಕ ವಿಳಂಬದಿಂದಾಗಿ ನರಿಬೋಳ್ – ಚಾಮನೂರು ಸೇತುವೆ ಕಾಮಗಾರಿಯು ಅರ್ಧಕ್ಕೆ ಸ್ಥಗಿತಗೊಂಡು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕ ಡಾ. ಅಜಯ್ ಸಿಂಗ್ ಅವರು ವಿಶೇಷ ಆಸಕ್ತಿ ವಹಿಸಿ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿದ್ದಾರೆ.
ಸದ್ಯ ಭೂ ಸ್ವಾಧೀನ ಪ್ರಕ್ರಿಯೆಯು ಅಂತಿಮ ಹಂತದಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಯುದ್ಧೋಪಾದಿಯಲ್ಲಿ ಪುನಾರಂಭಿಸಲು ಅಗತ್ಯವಿರುವ ಹೆಚ್ಚುವರಿ ಮೊತ್ತಕ್ಕೆ ಸರಕಾರವು ಅನುಮೋದನೆ ನೀಡಿರುವುದು ಪ್ರಮುಖ ಪಾತ್ರ ವಹಿಸಲಿದೆ.

ಜೇವರ್ಗಿಯ ಸಂಪರ್ಕ ಸೇತುವೆಯ ಆರ್ಥಿಕ ಹಾಗೂ ಸಾಮಾಜಿಕ ಮಹತ್ವವನ್ನು ಅರಿತ ಶಾಸಕ ಡಾ. ಅಜಯ್ ಧರ್ಮಸಿಂಗ್ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ಖುದ್ದಾಗಿ ಭೇಟಿಯಾಗಿ, ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಹೆಚ್ಚುವರಿ ಅನುದಾನ ಬಿಡುಗಡೆಗೆ ಅಧಿಕೃತ ಮನವಿ ಸಲ್ಲಿಸಿದ್ದರು. ಶಾಸಕರ ದೂರದೃಷ್ಟಿಯ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು, ಹೆಚ್ಚುವರಿ ಅನುದಾನ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದಲ್ಲದೆ, ಶೀಘ್ರದಲ್ಲೇ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ನುಡಿದಂತೆ ನಡೆದ ಸರ್ಕಾರ: – ಶಾಸಕ ಅಜಯ್ ಧರ್ಮಸಿಂಗ್
ನರಿಬೋಳ್ – ಚಾಮನೂರು ಸೇತುವೆಯು ಎರಡು ತಾಲ್ಲೂಕುಗಳ ದಶಕಗಳ ಸಂಪರ್ಕ ಕೊಂಡಿಯಾಗಿದೆ. ಭೂ ಸ್ವಾಧೀನದ ಸಮಸ್ಯೆಯಿಂದ ಕಾಮಗಾರಿ ತಡವಾಗಿತ್ತು, ಈಗ ಆ ತಾಂತ್ರಿಕ ಸಮಸ್ಯೆ ಸಂಪೂರ್ಣ ಬಗೆಹರಿದಿದೆ. ನಮ್ಮ ಮನವಿಗೆ ತಕ್ಷಣ ಸ್ಪಂದಿಸಿ ಕಾಮಗಾರಿ ಪ್ರಾರಂಭಿಸಲು ಅಗತ್ಯವಿರುವ ಹೆಚ್ಚುವರಿ ಅನುದಾನ ಅನುದಾನ ಬಿಡುಗಡೆ ಮಾಡಿರುವ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಜೇವರ್ಗಿ ಮತ್ತು ಚಿತ್ತಾಪುರ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಹೈಟೆಕ್ ಸೇತುವೆ ನಿರ್ಮಾಣದಿಂದ ಜೇವರ್ಗಿ ಮತ್ತು ಚಿತ್ತಾಪುರ ತಾಲ್ಲೂಕಿನ ನೂರಾರು ಹಳ್ಳಿಗಳ ನಡುವಿನ ಸಂಚಾರ ವ್ಯವಸ್ಥೆ ಸುಗಮಗೊಳ್ಳಲಿದ್ದು, ನಿತ್ಯ ಪ್ರಯಾಣಿಕರು ಹಾಗೂ ರೈತರಿಗೆ ಭಾರಿ ಅನುಕೂಲವಾಗಲಿದೆ. ಕೃಷಿ ಉತ್ಪನ್ನಗಳ ಸಾಗಾಟ, ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಈ ಸೇತುವೆ ಭಾರಿ ವೇಗ ನೀಡಲಿದೆ ನಮ್ಮ ಸರ್ಕಾರ ಸದಾ ಜನಪರವಾಗಿದ್ದು, ನಿರಂತರ ಅಭಿವೃದ್ಧಿ ಕಾರ್ಯಗಳ ಮೂಲಕ ‘ನುಡಿದಂತೆ ನಡೆದ ಸರ್ಕಾರ’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಶೀಘ್ರದಲ್ಲೇ ಅತ್ಯಂತ ಗುಣಮಟ್ಟದ ಕಾಮಗಾರಿ ಮುಗಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು.”
-ಡಾ.ಅಜಯ್ ಧರ್ಮಸಿಂಗ್, ಶಾಸಕರು ಜೇವರ್ಗಿ.