Home ಜಿಲ್ಲೆ ಜೈಲಿನಿಂದ ಹೊರಬಂದ ಮೇಲೆ ಉತ್ತಮ ನಾಗರಿಕರಾಗಿ ಬದುಕಿ: ನ್ಯಾ. ಮರಿಯಪ್ಪ ಸಂದೇಶ

ಜೈಲಿನಿಂದ ಹೊರಬಂದ ಮೇಲೆ ಉತ್ತಮ ನಾಗರಿಕರಾಗಿ ಬದುಕಿ: ನ್ಯಾ. ಮರಿಯಪ್ಪ ಸಂದೇಶ

ಯಾದಗಿರಿ:ಏ.೧೬:ಜೈಲು ಜೀವನವು ಕೇವಲ ಶಿಕ್ಷೆಯ ಪರ್ಯಾಯವಲ್ಲ, ಅದು ವ್ಯಕ್ತಿತ್ವ ಪರಿವರ್ತನೆಗೆ ದೊರೆಯುವ ಅಪರೂಪದ ಅವಕಾಶ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಮರಿಯಪ್ಪ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ನಡೆದ ‘ಮಾದಕ ವಸ್ತು ಮುಕ್ತ ಭಾರತಕ್ಕಾಗಿ ಜಾಗೃತಿ ಮತ್ತು ಸ್ವಾಸ್ಥ್ಯ ಸಂಚರಣೆ ಯೋಜನೆ-೨೦೨೫’ (ಓಂಐSA – ಜಾಗೃತಿ ಯೋಜನೆ) ಅಡಿಯಲ್ಲಿ ಆಯೋಜಿಸಲಾದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೈಲಿಗೆ ಬಂದ ಕೈದಿಗಳು ತಮ್ಮ ಹಳೆಯ ತಪ್ಪುಗಳಿಂದ ಪಾಠ ಕಲಿತು, ಬಿಡುಗಡೆಯಾದ ನಂತರ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಜೀವನ ನಡೆಸಬೇಕು. ಶಿಕ್ಷೆಯು ದಂಡನೆಗೆ ಮಾತ್ರ ಸೀಮಿತವಾಗದೆ, ಮನೋಭಾವ ಬದಲಾವಣೆಗೆ ಕಾರಣವಾಗಬೇಕು ಎಂದು ಅವರು ಹೇಳಿದರು.

ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯನ್ನಷ್ಟೇ ಅಲ್ಲ, ಕುಟುಂಬ ಹಾಗೂ ಸಮಾಜದ ಆರೋಗ್ಯವನ್ನೂ ಹಾಳು ಮಾಡುತ್ತದೆ. ಆದ್ದರಿಂದ ವ್ಯಸನಮುಕ್ತ ಜೀವನವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಕರೆ ನೀಡಿದರು.

ಯಾರೂ ಅರಿವಿನ ಕೊರತೆಯಿಂದ ನ್ಯಾಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಾ ಜನರ ನೆರವಿಗೆ ಸಿದ್ಧವಾಗಿದೆ ಎಂದು ತಿಳಿಸಿದರು.

ತಪ್ಪು ಮಾಡುವುದು ಮಾನವ ಸಹಜವಾದರೂ, ಅದನ್ನೇ ನೆನೆದು ಕುಳಿತುಕೊಳ್ಳದೆ ತಿದ್ದಿಕೊಂಡು ಹೊಸ ಬದುಕಿಗೆ ಕಾಲಿಟ್ಟರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂದು ಕೈದಿಗಳಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮನೋವೈದ್ಯ ಡಾ. ಅಮೀತಗ ಕುಮಾರ್, ಅರೆಕಾಲಿಕ ಸ್ವಯಂಸೇವಕ ರಾಘವೇಂದ್ರ ಹಾಗೂ ಕಾರಾಗೃಹ ಅಧೀಕ್ಷಕ ಎಸ್.ಎಸ್. ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.