Home ಜಿಲ್ಲೆ ಅಂಬೇಡ್ಕರ್ ಅವರ ಆದರ್ಶಗಳು ನಮ್ಮ ಜೀವನ, ಸಾಧನೆಗೆ ಪ್ರೇರಕ ಶಕ್ತಿ: ಜಿಲ್ಲಾಧಿಕಾರಿ

ಅಂಬೇಡ್ಕರ್ ಅವರ ಆದರ್ಶಗಳು ನಮ್ಮ ಜೀವನ, ಸಾಧನೆಗೆ ಪ್ರೇರಕ ಶಕ್ತಿ: ಜಿಲ್ಲಾಧಿಕಾರಿ

ಧಾರವಾಡ, ಏ.14: ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂತಹ ಕಠಿಣವಾದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಂಘಟನಾತ್ಮಕ ಸಂಕಷ್ಟಗಳನ್ನು ದಾಟಿ, ಜೀವನದಲ್ಲಿ ಜಯ ಸಾಧಿಸಿದರು ಎಂಬದನ್ನು ನಾವು ಗಮನಿಸಿದಾಗ, ಮನುಷ್ಯನ ಯಶಸ್ವಿಗೆ ಅವರ ಜೀವನ ಸಾಧನೆಗಳೇ ಪ್ರೇರಕ ಶಕ್ತಿಗಳಾಗುತ್ತವೆ ಎಂದು ಜಿಲ್ಲಾಧಿಕಾರಿ ಸ್ನೇಹಲ್.ಆರ್. ಅವರು ಹೇಳಿದರು.


ಅವರು ಧಾರವಾಡ ನಗರದ ಸನ್ಮತಿ ಮಾರ್ಗದ ಹತ್ತಿರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಹಯೋಗದಲ್ಲಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ 135 ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ, ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆ ಮೂಲಕ ಮಕ್ಕಳಿಗೆ, ದೀನದಲಿತರಿಗೆ, ಹಿಂದುಳಿದವರಿಗೆ ಅದರಲ್ಲೂ ವಿಶೇಷವಾಗಿ ಹಿಂದು ಕೋಡ್ ಬಿಲ್ ಮೂಲಕ ಮಹಿಳೆಯರ ಸಶಕ್ತಿಕರಣ ಮತ್ತು ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.


ಅಂಬೇಡ್ಕರ್ ಅವರ ಆದರ್ಶಗಳನ್ನು ನಾವು ಅಳವಡಿಸಿಕೊಂಡಾಗ ಮಾತ್ರ ಸರ್ವರಲ್ಲಿ ಸಮಾನತೆ ಮತ್ತು ನ್ಯಾಯಯುತ ಸಮಾಜ ನಿರ್ಮಾಣ ಕಾಣಲು ಸಾಧ್ಯ. ಅವರ ಚಿಂತನೆಗಳು ಯುವಜನತೆಗೆ ದಾರಿದೀಪವಾಗಿದ್ದು, ಪ್ರತಿಯೊಬ್ಬರೂ ಡಾ.ಅಂಬೇಡ್ಕರ್ ಅವರ ಜೀವನ ಚಿಂತನೆ, ಬೋಧನೆಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಭಾರತದ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಭಾರತ ದೇಶವು ಇಂದು ಅವರು ರೂಪಿಸಿದ ಸಂವಿಧಾನದ ಮಾರ್ಗದರ್ಶನದಲ್ಲಿಯೇ ನಡೆಯುತ್ತಿದೆ.


ಭಾರತೀಯ ಸಂವಿಧಾನದಲ್ಲಿ ಮಹಿಳಾ ಸಮಾನತೆ, ಆಸ್ತಿ ಸಮಾನ ಹಂಚಿಕೆ, ಉಚಿತ ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಮಾನವ ಅಭಿವೃದ್ಧಿಯ ಅಂಶಗಳನ್ನು ಅವರು ಅಳವಡಿಸಿದ್ದಾರೆ. ಎಲ್ಲರೂ ಸಂವಿಧಾನದ ಬಗ್ಗೆ ಸರಿಯಾದ ಅಧ್ಯಯನ ಮಾಡುವುದು ಅತಿ ಅವಶ್ಯಕ ಎಂದು ಅವರು ಹೇಳಿದರು.


ಸಮಾಜದ ಎಲ್ಲ ವರ್ಗದ ಜನರಿಗೆ ಮೂಲಭೂತ ಹಕ್ಕುಗಳನ್ನು ನೀಡಿ, ಸಂವಿಧಾನವನ್ನು ರೂಪಿಸಿದ ಮಹಾನ್ ನಾಯಕ ಅಂಬೇಡ್ಕರ್. ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಮತ್ತು ಶಿಕ್ಷಣವೇ ವ್ಯಕ್ತಿಯ ಬೆಳವಣಿಗೆಯ ಆಧಾರವಾಗಿದ್ದು, ಪ್ರತಿಯೊಬ್ಬರೂ ಸರಿಯಾದ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಜೀವನ ನಡೆಸಬೇಕು ಎಂದು ಅವರು ತಿಳಿಸಿದರು.


ಮಹಿಳೆಯರು ಮತ್ತು ಹಿಂದುಳಿದ ವರ್ಗಗಳಿಗೆ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದಿಂದ ರೂಪಿಸಲಾದ ಹಿಂದೂ ಕೋಡ್ ಬಿಲ್ ಬಗ್ಗೆ ಸಹ ಜನರು ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.


ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸದಾನಂದ ಬಿ.ಸುಗಂಧಿ ಅವರು ವಿಚಾರಗೋಷ್ಠಿಯಲ್ಲಿ ಹಿಂದೂ ಕೋಡ್ ಬಿಲ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.


ಕಾರ್ಯಕ್ರಮದಲ್ಲಿ ರಾಮಣ್ಣ ಗಡ್ಡರ ಅವರು ಬುದ್ಧ ಪ್ರಾರ್ಥನೆಯನ್ನು ಪಠಣ ಮಾಡಿದರು.
ವೇದಿಕೆಯಲ್ಲಿ ಎಡಿಸಿ ಗೀತಾ ಸಿ.ಡಿ., ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ ಹೆಬ್ಬಳ್ಳಿ ಅವರು ಉಪಸ್ಥಿತರಿದ್ದರು.


ಸಮಾಜ ಕಲ್ಯಾಣ ಇಲಾಖೆಯ ಎಂ.ಬಿ. ಸನ್ನೇರಿ ಅವರು ಸ್ವಾಗತಿಸಿ, ವಂದಿಸಿದರು ಹಾಗೂ ಪ್ರವೀಣ ಮಸಕಿ ಅವರು ಕಾರ್ಯಕ್ರಮ ನಿರೂಪಿಸಿದರು.


ವಿಚಾರಗೋಷ್ಠಿಯಲ್ಲಿ ಎಂ.ಅರವಿಂದ, ಲಕ್ಷ್ಮಣ ಬಕ್ಕಾಯಿ, ಅಶೋಕ ದೊಡಮನಿ, ವೆಂಕಟೇಶ ಸಗಬಲಾ ಸೇರಿದಂತೆ ಸಮಾಜದ ವಿವಿಧ ಪ್ರಮುಖರು, ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿ ಸದಸ್ಯರು, ದಲಿತ ಚಿಂತಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸಮಾಜದ ಹಿರಿಯರು, ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.