
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.16: ಗ್ರಾಮೀಣ ಕೂಲಿಕಾರ್ಮಿಕರಿಗೆ ಮಾನರೇಗಾ ಯೋಜನೆ ಅಡಿಯಲ್ಲಿ ನೂರು ದಿನ ಉದ್ಯೋಗ ನೀಡಲು ಆಗ್ರಹಿಸಿ ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ನಗರದಲ್ಲಿ ಜಿಲ್ಲಾ ಪಂಚಾಯಿತಿ ಬಳಿ ಬೃಹತ್ ಪ್ರತಿಭಟನೆ ಮಾಡಿ ಪ್ರಧಾನ ಮಂತ್ರಿಗಳಿಗೆ, ಮುಖ್ಯ ಮಂತ್ರಿಗಳಿಗೆ ಸಿ. ಇ. ಓ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡುತ್ತಾ ವಿ ಬಿ ಜಿ ರಾಮ್ ಜಿ ಯೋಜನೆ ಕೂಲಿಕಾರ್ಮಿಕರಿಗೆ ಉದ್ಯೋಗ ಕಸಿದುಕೊಂಡಿದೆ, ಶೆ.60ರಷ್ಟು ಹಣ ಕೇಂದ್ರ ಸರ್ಕಾರ , 40 ರಷ್ಟು ರಾಜ್ಯ ಸರ್ಕಾರ ಕೊಡಬೇಕು ಎಂದು ಹೇಳಿದ್ದಾರೆ, ಆದರೆ ಕಾಯ್ದೆ ತಿದ್ದುಪಡಿ ಮಾಡುವಾಗ ಯಾವುದೇ ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ತೆಗೆದುಕೊಳ್ಳದೆ, ಸರ್ವಾಧಿಕಾರಿ ದೊರಣೆಯಿಂದ ಈ ಕಾಯ್ದೆ ಜಾರಿಗೆ ತರಲಾಗಿದೆ, ಇದನ್ನು ನಾವೆಲ್ಲ ಸೇರಿ ವಿರೋಧಿಸಬೇಕು ಎಂದರು.
ರೈತ ಮುಖಂಡ ಕಲ್ಲುಕಂಬ ಪಂಪಾಪತಿ ಅವರು ಮಾತನಾಡುತ್ತಾ ರಾಜ್ಯ ಸರ್ಕಾರ ಕೂಡಲೇ ಕೂಲಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಸೃಷ್ಟಿ ಮಾಡಲು ಮುಂದಾಗಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡುತ್ತಾ ಕೇಂದ್ರ ಸರ್ಕಾರ ಹಂತ ಹಂತವಾಗಿ ಪ್ಯಾಸಿಷ್ಟಿ ದಾರಿಯನ್ನು ಹಿಡಿಯುವ ಸಲುವಾಗಿ ಅಧಿಕಾರದ ಕೇಂದ್ರೀಕರಣ, ಹಣದ ಕೇಂದ್ರೀಕರಣ ಮಾಡಲು ಸರ್ವಪ್ರಯತ್ನ ಮಾಡುತ್ತಿದೆ, ಅದರ ಭಾಗವಾಗಿ ಈ ವಿ ಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ, ಇದರ ವಿರುದ್ಧ ಈ ದೇಶದ ದುಡಿಯುವ ವರ್ಗ ಬಲಿಷ್ಠ ಹೋರಾಟ ಕಟ್ಟುವುದರ ಮೂಲಕ ಆಳ್ವಿಕರ ಇಂತ ಕುತಂತ್ರಗಳನ್ನು ಸೋಲಿಸಿ, ದುಡಿಯುವವರ ಸಮಾಜ ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ಸಂಘದ ನಾಯಕರಾದ ಈ.ಹನುಮಂತಪ್ಪ ಮತ್ತು ಬಸಣ್ಣ ಮಾತನಾಡಿದರು. ಸಂಘದ ಜಿಲ್ಲಾ ಸಮಿತಿ ಸದಸ್ಯರಾದ ಮಾರೆಪ್ಪ, ಹೊನ್ನುರಪ್ಪ, ಸದಸ್ಯರಾದ ವೆಂಕಟೇಶ್, ವೀರಭದ್ರಪ್ಪ, ಪಂಪಾಪತಿ, ರುದ್ರಮ್ಮ, ಈರಣ್ಣ, ಹೋನ್ನುರಪ್ಪ ಸೇರಿದಂತೆ ಹಲವು ಕೂಲಿ ಕಾರ್ಮಿಕರು ಭಾಗವಹಿಸಿದ್ದರು






















