Home ಜಿಲ್ಲೆ ಬೆಂಗಳೂರು ರಾಜ್ಯದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಪ್ರಮೋದ್ ಆಗ್ರಹ

ರಾಜ್ಯದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಪ್ರಮೋದ್ ಆಗ್ರಹ

ಕೋಲಾರ,ಮಾ,೨೭- ರಾಜ್ಯದಲ್ಲಿ ಖಾಲಿ ಇರುವ ೨.೮೪ ಲಕ್ಷ ಹುದ್ದೆಗಳಿಗೆ ಸರ್ಕಾರ ಈ ಕೂಡಲೇ ನೇಮಕಾತಿಯನ್ನು ಮಾಡುವ ಮೂಲಕ ಉದ್ಯೋಗ ನಿರೀಕ್ಷಿತ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕೆಂದು ವಿವೇಕ್ ಇನ್ಫೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ.ಪ್ರಮೋದ್ ಕುಮಾರ್ ಆಗ್ರಹಿಸಿದರು.


ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರವು ನೇಮಕಾತಿ ವಿಷಯದಲ್ಲಿ ಕೇವಲ ಭರವಸೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದೆಯೇ ಹೊರತು, ಅಧಿಸೂಚನೆಯನ್ನು ಮಾತ್ರ ಇಲ್ಲಿಯವರೆಗೆ ಹೊರಡಿಸಿಲ್ಲ ಎಂದು ಆರೋಪಿಸಿದರು.


ನೇಮಕಾತಿ ವಿಳಂಬ ದೋರಣೆಯನ್ನು ಖಂಡಿಸಿ ಸಾಕಷ್ಟು ಅಭ್ಯರ್ಥಿಗಳು ರಾಜ್ಯದ ವಿವಿಧ ಭಾಗಗಳಲ್ಲಿ ನಿರಂತರ ಹೋರಾಟಗಳನ್ನು ನಡೆಸಿದರೂ ಸಹ ಸರ್ಕಾರ ಮಾತ್ರ ಮಣಿಯುತ್ತಿಲ್ಲ. ಇತ್ತೀಚಿನ ಬಜೆಟ್‌ನಲ್ಲಿ ೫೬,೪೩೨ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಈ ರೀತಿಯಾಗಿ ಕೇವಲ ಆಶ್ವಾಸನೆಗಳನ್ನು ನೀಡುತ್ತಾ ಸಾಗುತ್ತಿದೆಯೇ ಹೊರತು ಯಾವುದೇ ರೀತಿಯ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಿಲ್ಲ. ಇದರಿಂದಾಗಿ ಅಭ್ಯರ್ಥಿಗಳಿಗೆ ಸರ್ಕಾರದ ಮೇಲೆ ಕನಿಷ್ಠ ನಂಬಿಕೆಯೂ ಇಲ್ಲದಂತಾಗಿದೆ ಎಂದು ಹೇಳಿದರು.


ಸಾಕಷ್ಟು ಅಭ್ಯರ್ಥಿಗಳು ಸರ್ಕಾರಿ ಹುದ್ದೆಯನ್ನು ಪಡೆಯಬೇಕೆಂದು ಕೆಲವು ವರ್ಷಗಳಿಂದ ಸಿದ್ದತೆ ಮಾಡುತ್ತಿದ್ದಾರೆ. ಅದರಲ್ಲಿ ಹೆಚ್ಚು ಮಂದಿಗೆ ನಿಗಧಿತ ವಯಸ್ಸು ಮೀರಿ ಹೋಗಿದೆ. ಇನ್ನೂ ವಯೋಮಿತಿ ಸಡಲಿಕೆಯನ್ನು ಒಂದು ವರ್ಷದಲ್ಲಿ ಆಗುವ ನೇಮಕಾತಿಗಳಿಗೆ ಮಾಡುವುದಾಗಿ ಸರ್ಕಾರ ಹೇಳಿದೆ. ಕೆಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಗಳು ನಡೆಯದೇ ಇರುವುದರಿಂದ ವಯೋಮತಿ ಸಡಲಿಕೆಯನ್ನು ನೀಡುವುದು ಸೂಕ್ತವಾಗಿದೆ. ಆದರೆ ವಯೋಮಿತಿ ಸಡಲಿಕೆ ನೀಡುತ್ತೇವೆ ಎಂದು ಕೊಂಡು ವರ್ಷಗಳಾದರೂ ನೇಮಕಾತಿ ಮಾಡದಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.


ಸಂಪನ್ಮೂಲ ವ್ಯಕ್ತಿ ಎಸ್.ಆರ್.ರಾಖೇಶ್ ಮಾತನಾಡಿ, ಸರ್ಕಾರವು ಕೇವಲ ಮೀಸಲಾತಿ, ಒಳಮೀಸಲಾತಿ ಎಂದು ಕಥೆ ಹೇಳಿಕೊಂಡು ನೇಮಕಾತಿಗಳನ್ನು ಮಾಡದೆ ಕಾಲಹರಣ ಮಾಡುತ್ತಾ ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಮೀಸಲಾತಿ ಮತ್ತು ಒಳಮೀಸಲಾತಿಯ ಸಮಸ್ಯೆಯು ಮುಗಿಯದ ಅಧ್ಯಾಯವಾಗಿದೆ. ಹಾಗಾಗಿ ಸರ್ಕಾರ ಕೇವಲ ಇದನ್ನೇ ನೋಡಿಕೊಂಡು ಕೂರುವ ಬದಲು ವಿದ್ಯಾರ್ಥಿಗಳ ಭವಿಷ್ಯದ ಕಡೆಗೂ ಗಮನ ಕೊಡುವ ಕೆಲಸ ಮಾಡಬೇಕು ಎಂದರು.


ಮೀಸಲಾತಿ ಮತ್ತು ಒಳಮೀಸಲಾತಿ ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿದ ನಂತರ ಮಾಡುವ ನೇಮಕಾತಿಗಳಿಗೆ ಬೇಕಾದರೆ ಅದನ್ನು ಅಳವಡಿಸಿಕೊಳ್ಳುವ ಕೆಲಸವನ್ನು ಮಾಡಿ. ಅದನ್ನು ಬಿಟ್ಟು ಮೀಸಲಾತಿ ಸಮಸ್ಯೆಯನ್ನು ಮುಂದಿಟ್ಟುಕೊಂಡು ನೇಮಕಾತಿ ಪ್ರಕ್ರಿಯೆಗಳನ್ನು ಮಾಡದೆ ಇರುವುದು ಸೂಕ್ತವಲ್ಲ. ಹಾಗಾಗಿ ಸರ್ಕಾರವು ಈ ಕೂಡಲೇ ಹಿಂದಿನ ಮೀಸಲಾತಿಯ ಪ್ರಕಾರ ನೇಮಕಾತಿಗಳನ್ನು ಪ್ರಾರಂಭಿಸಿ, ಅಭ್ಯರ್ಥಿಗಳ ಭವಿಷ್ಯಕ್ಕೆ ಬೆಳಕು ಚೆಲ್ಲುವ ಕೆಲಸವನ್ನು ಮಾಡಬೇಕು ಎಂದು ಆಗ್ರಹಿಸಿದರು.


ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮದವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಹೋದಾಗ ಪ್ರಶ್ನೆಪತ್ರಿಕೆಯನ್ನು ಎದರಿಸುವುದು ಒಂದು ಸಮಸ್ಯೆಯಾದರೆ, ಆ ಪ್ರಶ್ನೆಪತ್ರಿಕೆಗಳ ತರ್ಜುಮೆಯನ್ನು ಅರ್ಥಮಾಡಿಕೊಳ್ಳುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಇಂಗ್ಲೀಷ್‌ನಲ್ಲಿ ಪತ್ರಿಕೆಯನ್ನು ಸಿದ್ದಪಡಿಸಿ ಅದನ್ನು ಗೂಗಲ್ ಟ್ರಾನ್ಸ್‌ಲೇಟ್ ಬಳಸಿ ಭಾಷಾಂತರ ಮಾಡಿರುತ್ತಾರೆ. ಹಾಗಾಗಿ ಇದನ್ನು ಕನ್ನಡದ ಮಾಧ್ಯಮದವರು ಅರ್ಥಮಾಡಿಕೊಳ್ಳುವುದು ಕಬ್ಬಿಣದ ಕಡಲೆಯಾಗಿದೆ. ಹಾಗಾಗಿ ಸರ್ಕಾರ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಉದ್ಯೋಗಗಳಲ್ಲಿ ಅವರಿಗೆ ಅನ್ಯಾಯವಾಗದಂತೆ ಕ್ರಮವಹಿಸಬೇಕು ಎಂದರು.


ಈ ಸಂದರ್ಭದಲ್ಲಿ ಸಂಸ್ಥೆಯ ಬಿ. ಗೋಪಾಲ್, ಕೆ.ವಿ. ಶಶಿಕುಮಾರ್, ಎಂ.ಸಿ. ಪ್ರಸನ್ನ ಕುಮಾರ್ ಸ್ಪರ್ಧಾರ್ಥಿಗಳಾದ ಎಸ್. ಮುಕ್ತಾನಂದ, ಜಿ. ಮಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.