
ಮಂಗಳೂರು- ದೇವರ ದಾಸಿಮಯ್ಯ ಅವರು ವಚನ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸರ್ಕಾರವು ಮಹನೀಯರ ಜಯಂತಿಗಳನ್ನು ಆಚರಿಸುತ್ತಿದ್ದು, ಈ ಬಗ್ಗೆ ಯುವಜನರು ಜಯಂತಿಯ ಸಂದೇಶಗಳನ್ನು ತಿಳಿದುಕೊಳ್ಳಬೇಕು. ಯುವಜನತೆ ಜಯಂತಿ ಆಚರಣೆ ವಿಚಾರಗಳನ್ನು ತಿಳಿದುಕೊಳ್ಳುವ ಜೊತೆಗೆ ಮಹಾನ್ ವ್ಯಕ್ತಿಗಳ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು.
ಅವರು ಸೋಮವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಸಹಕಾರದೊಂದಿಗೆ ನಡೆದ ದೇವರ ದಾಸಿಮಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಜಯಂತಿ ಆಚರಣೆಗಳು ಅರ್ಥಪೂರ್ಣವಾಗಿದ್ದು, ಹಿಂದಿನ ಆಚಾರ ವಿಚಾರಗಳು, ಸಾಮಾಜಿಕ ಕ್ರಾಂತಿಗಳ ಬಗ್ಗೆ ಇಂದಿನ ಯುವ ಜನಾಂಗ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಉಪನ್ಯಾಸ ನೀಡಿ ಮಾತನಾಡಿ, ವೃತ್ತಿಯಲ್ಲಿ ನೇಕಾರರಾಗಿದ್ದ ದೇವರ ದಾಸಿಮಯ್ಯ ಅವರ ಸಾಹಿತ್ಯ ಸೃಷ್ಟಿ ಮತ್ತು ಬದುಕು ಬಹಳ ಮಹತ್ತರ. ಅತ್ಯಂತ ಸರಳವಾದ ಭಾ?ಯಲ್ಲಿ ಕ್ಲಿಷ್ಟವಾದ ಸಂಗತಿಗಳನ್ನು ಮನಮುಟ್ಟುವ ಹಾಗೆ ವಚನಗಳ ಮೂಲಕ ಸಾರಿದವರಲ್ಲಿ ದೇವರ ದಾಸಿಮಯ್ಯ ಕೂಡ ಒಬ್ಬರು. ಭಕ್ತಿ ಮತ್ತು ಸಾಮಾಜಿಕ ವಿಚಾರಗಳನ್ನು ಸರಳವಾಗಿ ವಚನಗಳಲ್ಲಿ ಮೂಡಿಸಿದ್ದಾರೆ.
ದೇವರ ದಾಸಿಮಯ್ಯ ಅವರು ತಮ್ಮ ಸರಳ ವಚನಗಳ ಮೂಲಕ ನೈಜಭಕ್ತಿಯ ತತ್ವಗಳನ್ನು ಸಾರಿದ್ದಾರೆ. ಭಕ್ತಿ ಸಾಧನೆಯಲ್ಲಿ ಪತಿ-ಪತ್ನಿಯರಲ್ಲಿ ಸಾಮರಸ್ಯ ಅಗತ್ಯ. ಹೆಂಡತಿ ಭಕ್ತೆಯಾಗಿ, ಗಂಡ ಭಕ್ತನಲ್ಲದಿದ್ದರೆ, ಗಂಡ ಹೆಂಡತಿ ಬೇರೆ ಬೇರೆ ದೇವರನ್ನು ಪೂಜಿಸಿದರೆ ಅಮೃತದಲ್ಲಿ ವಿಷ ಬೆರೆಸಿದಂತೆ. ಸತಿ, ಪತಿ ಏಕತಾಭಾವದಿಂದ ಶಿವನನ್ನು ಪೂಜಿಸಬೇಕು ಎಂಬುದು ದಾಸಿಮಯ್ಯರ ಮಾತು ಎಂದು ಅವರು ಹೇಳಿದರು.
ದೇವಾಂಗ ಸಮಾಜದ ಶರವಣ ಮತ್ತು ತ್ಯಾಗರಾಜ್, ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥೆ ಲಕ್ಷ್ಮೀದೇವಿ ಎಲ್ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಗಣಪತಿ ಗೌಡ ಎಸ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿ, ಸಂಸ್ಥೆಯ ಕನ್ನಡ ಪ್ರಾಧ್ಯಾಪಕ ಡಾ. ಮಾಧವ್ ವಂದಿಸಿದರು. ವಿದ್ಯಾರ್ಥಿ ಪೂರ್ಣಿಮಾ ನಿರೂಪಿಸಿದರು.

























