
ಬೆಂಗಳೂರು, ಮಾ. ೧೦-ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಕಡಿಮೆ ಬೆಲೆಯಲ್ಲಿ ಊಟ-ತಿಂಡಿ ದೊರಕಲಿ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಯೋಜನೆಗೆ ಈಗ ಐ-ಟೆಕ್ ಸ್ಪರ್ಶ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಂದಾಗಿದೆ.
ನಗರದ ಹಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಕೆ ಗುತ್ತಿಗೆದಾರರು ನಿಜವಾದ ಮಾರಾಟಕ್ಕಿಂತ ಹೆಚ್ಚು ಸಂಖ್ಯೆಯನ್ನು ತೋರಿಸಿ ಸುಳ್ಳು ಲೆಕ್ಕ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಕೆಲ ಕ್ಯಾಂಟೀನ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಊಟ-ತಿಂಡಿ ವಿತರಣೆ ನಡೆದರೂ, ಜಿಬಿಎಗೆ ಹೆಚ್ಚಿನ ಸಂಖ್ಯೆಯನ್ನು ತೋರಿಸಿ ಬಿಲ್ ಸಲ್ಲಿಸಿ ಹಣ ಪಡೆಯುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಕ್ಯಾಂಟೀನ್‌ಗಳಲ್ಲಿ ನಿತ್ಯ ಎಷ್ಟು ಊಟ-ತಿಂಡಿ ಮಾರಾಟವಾಗುತ್ತಿದೆ ಎಂಬುದನ್ನು ಗಮನಿಸಲು ಮಾರ್ಷಲ್‌ಗಳನ್ನು ನೇಮಕ ಮಾಡಲಾಗಿತ್ತು. ಆದರೆ ಕೆಲವು ಕಡೆ ಮಾರ್ಷಲ್‌ಗಳು ಕೂಡ ಗುತ್ತಿಗೆದಾರರ ಜೊತೆ ಕೈಜೋಡಿಸಿ ಸರಿಯಾದ ಲೆಕ್ಕ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಇದರಿಂದ ಮಾರ್ಷಲ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಈಗ ತಂತ್ರಜ್ಞಾನ ಬಳಕೆ ಮಾಡುವ ಬಗ್ಗೆ ಜಿಬಿಎ ಚಿಂತನೆ ನಡೆಸುತ್ತಿದೆ.
ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲಿ ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಿ, ದಿನವೂ ಎಷ್ಟು ಮಂದಿ ಊಟ-ತಿಂಡಿ ಪಡೆಯುತ್ತಾರೆ ಎಂಬುದನ್ನು ಸ್ವಯಂಚಾಲಿತವಾಗಿ ದಾಖಲಿಸುವ ವ್ಯವಸ್ಥೆ ಮಾಡಲಾಗುವ ಸಾಧ್ಯತೆ ಇದೆ. ಇನ್ನೂ ಎಐ ಕ್ಯಾಮೆರಾಗಳಿಂದ ಸಿಗುವ ಮಾಹಿತಿಯ ಆಧಾರದ ಮೇಲೆ ಗುತ್ತಿಗೆದಾರರಿಗೆ ಬಿಲ್ ಮೊತ್ತ ಪಾವತಿಸುವ ಹೊಸ ವ್ಯವಸ್ಥೆ ಜಾರಿಗೆ ತರಲು ಜಿಬಿಎ ಯೋಜನೆ ರೂಪಿಸುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಇಂದಿರಾ ಕ್ಯಾಂಟೀನ್ ನಲ್ಲಿ ಕಾರ್ಯ ನಿರ್ವಹಿಸಿತ್ತಿರೋ ಮಾರ್ಷಲ್ ಗಳನ್ನು ತೆಗೆದು ಹಾಕಲು ಈಗಾಗಲೇ ಜಿಬಿಎ ಮುಖ್ಯ ಅಯುಕ್ತರು ಎಲ್ಲಾ ನಗರಪಾಲಿಕೆ ಅಯುಕ್ತರಿಗೆ ಸೂಚನೆ ನೀಡಿ.ಮಾರ್ಷಲ್ ಗಳನ್ನು ಕಸ ವಿಲೇವಾರಿ ಹಾಗೂ ಇತರೆ ಕೆಲಸಗಳಿಗೆ ನೇಮಿಸಿ ಅಂತ ತಿಳಿಸಿದರೆ.
ಈ ವ್ಯವಸ್ಥೆ ಜಾರಿಗೆ ಬಂದರೆ ಸುಳ್ಳು ಲೆಕ್ಕಗಳಿಗೆ ಕಡಿವಾಣ ಬೀಳುವ ಜೊತೆಗೆ ಸರ್ಕಾರದ ಹಣದ ದುರುಪಯೋಗ ತಡೆಯಲು ಸಹಾಯಕವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
























