Home ಜಿಲ್ಲೆ ಬೆಂಗಳೂರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆ

ಬೆಂಗಳೂರು, ಮಾ. ೬- ರಾಜ್ಯ ಬಜೆಟ್‌ನಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರ ಹಾಗೂ ೧೧ ಜಿಲ್ಲೆಗಳಲ್ಲಿ ತಾರಾಲಯಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.


ಈ ಸಾಲಿನಲ್ಲಿ ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಯಾದಗಿರಿ, ಕೊಪ್ಪಳ ಹಾಗೂ ಬೀದರ್ ಜಿಲ್ಲೆಗಳಲ್ಲಿ ತಲಾ ೪ ಕೋಟಿಯಂತೆ ಒಟ್ಟು ೨೪ ಕೋಟಿ ವೆಚ್ಚದಲ್ಲಿ ೬ ಹೊಸ ತಾರಾಲಯಗಳನ್ನು ಆರಂಭಿಸಲಾಗುವುದು ಎಂದು ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.


ಬೆಂಗಳೂರಿನ ಆದಿನಾರಾಯಣ ಹೊಸಹಳ್ಳಿಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ವಿಜ್ಞಾನ ನಗರವನ್ನು ೨೩೩ ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.


ಡ್ರೋಣ್‌ಗಳ ಪರೀಕ್ಷೆ ಮತ್ತು ಕಾರ್ಯಕ್ಷಮತೆ ಮೌಲ್ಯಮಾಪನಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡ್ರೋಣ್ ಪರೀಕ್ಷಾ ಕೇಂದ್ರ ಸ್ಥಾಪನೆ, ಪರಿಣಾಮಕಾರಿ ನರ ಶಸ್ತ್ರಚಿಕಿತ್ಸೆಗೆ ಪೂರಕವಾಗಲು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ನೆರವಿನ ರೋಬೋಗಳನ್ನು ಐಐಐಟಿಗಳನ್ನು ಬೆಂಗಳೂರು ಮತ್ತು ನಿಮ್ಹಾನ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿನ್ಯಾಸಗೊಳಿಸಲು ೪ ಕೋಟಿ ರೂ. ನೆರವು, ಹೊಸದಾಗಿ ಸ್ಥಾಪಿಸಲಾಗಿರುವ ಅತ್ಯಾಧುನಿಕ ಜಿನೊಮ್ ಎಡಿಟಿಂಗ್ ಮತ್ತು ಜೀನ್ ಚಿಕಿತ್ಸಾ ಸಂಸ್ಥೆ ಒಳಗೊಂಡಂತೆ ಮತ್ತಿತರ ಜೈವಿಕ ತಂತ್ರಜ್ಞಾನ ಆಧಾರಿತ ಪ್ರಯೋಗಾಲಯಗಳಿಗೆ ಸ್ಥಳಾವಕಾಶ ಕಲ್ಪಿಸಲು ಮಾನವ ತಳಿ ವಿಜ್ಞಾನ ಕೇಂದ್ರದಲ್ಲಿ ಒಟ್ಟು ೨೦ ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಲಭ್ಯ ಒದಗಿಸುವುದಾಗಿಯೂ ಬಜೆಟ್‌ನಲ್ಲಿ ಹೇಳಿದ್ದಾರೆ.