
ಮನುಷ್ಯನ ಚಿಂತನೆ, ಆಲೋಚನೆ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ, ಹಾಗೆಯೇ ಸಮಾಜದಲ್ಲಿನ ಮಾನವ ಸಂಬಂಧಗಳು, ಸ್ಥಿತಿ ಗತಿಗಳು ಎಲ್ಲವೂ ಕಾಲ ಕಾಲಕ್ಕೆ ಬದಲಾಗುತ್ತಾ ಹೋಗುತ್ತವೆ. ಆದರೆ ನೂರಾರು ವರ್ಷಗಳ ನಂತರವೂ ಭವಿಷ್ಯತ್ತಿನಲ್ಲಿ ಏನಾಗುತ್ತದೆ ಎಂದು ಹೇಳಲು ಅಥವಾ ಊಹಿಸಲು ಎಲ್ಲರಿಂದಲೂ ಸಾಧ್ಯವಿಲ್ಲ, ಕೇವಲ ತಪಸ್ವಿಗಳು, ಸಿದ್ಧಿಗಳಿಂದ ಮಾತ್ರ ಸಾಧ್ಯ. ಹಾಗೆ ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಮೊದಲೇ ಹೇಳುವುದು “ಕಾಲಜ್ಞಾನ” ವಾದರೆ ಇದನ್ನೇ “ಭವಿಷ್ಯವಾಣಿ” ಎಂದು ಸಹ ಕರೆಯುತ್ತಾರೆ.
ಇಂತಹ ಕಾಲಜ್ಞಾನವನ್ನು ಬರೆದವರು ಕಾಲಜ್ಞಾನಿಗಳಾಗುತ್ತಾರೆ. ಭಾರತದ ಸನಾತನ ಧರ್ಮದಲ್ಲಿ ಕಾಲಜ್ಞಾನವನ್ನು ಬಲ್ಲ ಮಹರ್ಷಿಗಳು, ಋಷಿಗಳು, ತಪಸ್ವಿಗಳು, ಸಂತರು ಬಹಳಷ್ಟು ಮಂದಿ ಇದ್ದರೂ, ಅವರಲ್ಲಿ ಹೆಚ್ಚು ಪ್ರಚಲಿತರಾದವರೆಂದರೆ ಪುರಾಣ ಕಾಲದಲ್ಲಿ ವ್ಯಾಸ ಮಹರ್ಷಿಗಳು ಒಬ್ಬರಾದರೆ, ಇತಿಹಾಸ ಕಾಲದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದವರಲ್ಲಿ “ಭಾರತದ ನೋಸ್ಟ್ರಾಡಾಮಸ್ ಎಂದು ಪ್ರಸಿದ್ಧರಾದವರು ೧೭ ನೇ ಶತಮಾನದಲ್ಲಿ ಬದುಕಿದ್ದ “ಪೋತೂಲೂರಿ ವೀರಬ್ರಹ್ಮೇಂದ್ರ ಸ್ವಾಮಿ” ರವರು. ಹಾಗೆಯೇ ಮತ್ತೊಬ್ಬರು ತ್ರೇತಾಯುಗದಲ್ಲಿ ಏಕಚಕ್ರಪುರವೆಂದು ಪ್ರಸಿದ್ಧವಾದ, ಭೀಮಸೇನನು ಭಕಾಸುರನೆಂಬ ರಾಕ್ಷಸನನ್ನು ಸಂಹಾರ ಮಾಡಿದ ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಕ್ಷೇತ್ರ ಕೈವಾರದಲ್ಲಿ ನೆಲೆಸಿರುವ ಸದ್ಗುರು ಯೋಗಿ ನಾರೇಯಣ ತಾತಯ್ಯನವರು.
ಕೃತಯುಗದಿಂದಲೂ ತನ್ನದೇ ಆದ ಸ್ಥಳ ಪುರಾಣವನ್ನು ಹೊಂದಿರುವ ಕ್ಷೇತ್ರ ಕೈವಾರದಲ್ಲಿ ಕ್ರಿ.ಶ.೧೭೨೬ ರಲ್ಲಿ ಜನಿಸಿದ ನಾರಾಯಣಪ್ಪನವರು ಸಂಸಾರವನ್ನು ತೊರೆದು ಸನ್ಯಾಸಿಯಾಗಿ ಯೋಗ ನರಸಿಂಹಸ್ವಾಮಿ ಗುಹೆಯಲ್ಲಿ ಅಖಂಡ ತಪಸ್ಸನ್ನು ಆಚರಿಸಿ ಅಷ್ಟಾಂಗ ಯೋಗ ಮಾರ್ಗದಿಂದ ಮುಕ್ತಿಯನ್ನು ಪಡೆಯಲು ಸಾಧ್ಯ ಎಂಬ ಆತ್ಮಯೋಗದ ಮಾರ್ಗವನ್ನು ಅರಿತವರು. ತನ್ನ ಭಕ್ತಿ ಮತ್ತು ತಪಸ್ಸಿನ ಶಕ್ತಿಯಿಂದ ಭಕ್ತರಿಗೆ ಜ್ಞಾನ ಬೋಧನೆಯನ್ನು ಮಾಡುವುದರ ಜೊತೆಗೆ ಬೆಣಚು ಕಲ್ಲನ್ನು ಕಲ್ಲುಸಕ್ಕರೆಯಾಗಿಸಿ ಪ್ರಸಾದವಾಗಿ ನೀಡುತ್ತಿದ್ದ ಮಹಾನ್ ಪವಾಡ ಪುರುಷರು. ಮಣ್ಣಿನಿಂದ ಮಾಡಿದ ಗರುಡನಿಗೆ ಜೀವ ತುಂಬಿದವರು, ಹಾಗೆಯೇ ಬರಗಾಲ ಬಂದಾಗ ಜನರ ಕಷ್ಟ ನಿವಾರಿಸಲು ತಮ್ಮ ತಪಸ್ಸಿನ ಶಕ್ತಿಯಿಂದ ಮಳೆಯನ್ನು ಇಳೆಗೆ ತರಿಸಿದವರು. ಇಂತಹ ತ್ರಿಕಾಲಜ್ಞಾನಿಗಳು ಜನಮನದಲ್ಲಿ ಪ್ರೀತಿಗೆ ಪಾತ್ರರಾಗಿ “ತಾತಯ್ಯ ಎನಿಸಿಕೊಂಡು ತಮ್ಮ ಜೀವನದ ೧೧೦ ವರ್ಷಗಳ ನಂತರ ಇಚ್ಛಾಮರಣ ಶಕ್ತಿ ಹೊಂದಿದವರಾಗಿ ಕೈವಾರದಲ್ಲಿ ಬೃಂದಾವನವನ್ನು ಕ್ರಿ.ಶ. ೧೮೩೬ ರಲ್ಲಿ ಪ್ರವೇಶಿಸಿದರು. ಅಂದಿನಿಂದ ಇಂದಿಗೂ ಬರುವ ಭಕ್ತರಿಗೆ ಬೇಡಿದ ವರ ನೀಡುವ ಕಲ್ಪವೃಕ್ಷವಾಗಿ ದೈವ ಸಾಕ್ಷಾತ್ಕಾರವನ್ನು ಜನಸಾಮಾನ್ಯರಿಗೆ ಕರುಣಿಸುತ್ತಿರುವ ತಾತಯ್ಯನವರು ಅವತಾರ ಪುರುಷರು.
ಸದ್ಗುರುಗಳು ಒಬ್ಬ ಸಮಾಜ ಸುಧಾರಕರು ಅವರು ಸಮಾಜದಲ್ಲಿನ ಜಾತಿ ಪದ್ಧತಿ, ಮೂಢನಂಬಿಕೆ ಮುಂತಾದ ಹಲವಾರು ಸಾಮಾಜಿಕ ಪಿಡುಗುಗಳನ್ನು ವಿರೋಧಿಸಿದವರು. ವೇದಗಳು, ಉಪನಿಷತ್ತುಗಳು ಭಗವದ್ಗೀತೆಯ ಸಾರವನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಮ್ಮ ಸರಳವಾದ ಕೀರ್ತನೆಗಳು, ಪದ್ಯಗಳು, ತತ್ವಗಳ ಮೂಲಕ ಬೋಧಿಸಿ ಸಮಾಜ ಸುಧಾರಣೆಗೆ ಒತ್ತು ನೀಡಿದ ವರಕವಿಗಳು. ಹಾಗೆಯೇ ತಮ್ಮ ಅಪಾರವಾದ ತಪಸ್ಸಿನ ಶಕ್ತಿಯಿಂದ ಈ ಪ್ರಪಂಚದಲ್ಲಿ ಮುಂದೆ ಏನಾಗುತ್ತದೆ ಎಂದು ಭವಿಷ್ಯ ವಾಣಿ ಅಂದರೆ ಕಾಲಜ್ಞಾನದ ಗ್ರಂಥವನ್ನು ಬರೆದಿದ್ದಾರೆ.
ಕೈವಾರ ತಾತಯ್ಯನವರು ತಮ್ಮ ಕಾಲಜ್ಞಾನದಿಂದ ವಿಶ್ವ ವಿಖ್ಯಾತಿ ಪಡೆದವರು ಕಾರಣ ಅವರು ಹೇಳಿದ ಕಾಲಜ್ಞಾನ ಅಕ್ಷರಶಃ ನಿಜವಾಗುತ್ತಿದೆ. ತಾತಯ್ಯನವರು ರಾಜಕೀಯದ ಬಗ್ಗೆ, ಧರ್ಮದ ಬಗ್ಗೆ, ಸಾಮಾಜಿಕ ವ್ಯವಸ್ಥೆಯ ಬಗ್ಗೆ, ಸ್ತ್ರೀ ಪುರುಷರ ಸಂಬಂಧಗಳ ಬಗ್ಗೆ, ಭ್ರಷ್ಟಾಚಾರದ ಬಗ್ಗೆ, ಹೀಗೆ ಪ್ರಪಂಚದ ಆಗು ಹೋಗುಗಳ ಬಗ್ಗೆ ಕಾಲಜ್ಞಾನವನ್ನು ಬರೆದಿದ್ದು ಆ ಕಾಲಜ್ಞಾನದಲ್ಲಿ ಸಮಾಜದಲ್ಲಿನ ಬಡವರ ಮತ್ತು ರೈತರ ಬಗ್ಗೆ ಸಹ ಉಲ್ಲೇಖಿಸಿರುವುದು ನಿಜವಾಗಿಯೂ ತಾತಯ್ಯನವರಿಗೆ ಬಡವರ ಮತ್ತು ರೈತರ ಬಗ್ಗೆ ಇದ್ದ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಭವಿಷ್ಯತ್ತಿನಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮೊದಲೇ ನುಡಿಯುವುದು ಎಲ್ಲರಿಂದಲೂ ಸಾಧ್ಯವಿಲ್ಲ ಭಗವಂತನ ಅನುಗ್ರಹ ಇರಬೇಕು. ಅಂತಹ ಭಗವಂತನ ಅನುಗ್ರಹ ಪಡೆದವರು ಸದ್ಗುರು ಶ್ರೀ ಕೈವಾರ ತಾತಯ್ಯನವರು. ಅವರು ಬರೆದ ಕಾಲಜ್ಞಾನ ಎಷ್ಟರ ಮಟ್ಟಿಗೆ ನಿಜವಾಗಿದೆ ಎಂದರೆ ಅವರು ೧೭ನೇ ಶತಮಾನದಲ್ಲಿಯೇ ಮುಂದೆ ಭಾರತಕ್ಕೆ ಬ್ರಿಟೀಷರಿಂದ ಸ್ವಾತಂತ್ರ್ಯ ಬರುತ್ತದೆ ಎಂದು ನುಡಿದಿದ್ದರು.
























