
ಕೋಲಾರ,ಮಾ,೩- ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ನೂತನ ಉಪಾಧ್ಯಕ್ಷರಾಗಿ ಕೋಲಾರದವರಾದ ಊರಬಾಗಿಲು ಶ್ರೀನಿವಾಸ್ ನೇಮಕಗೊಂಡಿದ್ದು ಇಂದು ನಿಗಮದಲ್ಲಿ ಅಧಿಕೃತವಾಗಿ ರಾಜ್ಯ ಆಹಾರ,ನಾಗರೀಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಹೆಚ್. ಮುನಿಯಪ್ಪ ಉಪಸ್ಥಿತಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಅಧಿಕಾ ಸ್ವೀಕರಿಸಿ ಮಾತನಾಡಿದ ಊರುಬಾಗಿಲು ಶ್ರೀನಿವಾಸ್, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ೧೯೭೩ ರಲ್ಲಿ ಸ್ಥಾಪಿತವಾದ ರಾಜ್ಯ ಸರ್ಕಾರದ ಸಂಸ್ಥೆಯಾಗಿದ್ದು, ಇದು ಸಾರ್ವಜನಿಕ ವಿತರಣಾ ಪದ್ಧತಿಯ ಅಡಿಯಲ್ಲಿ ಆಹಾರ ಧಾನ್ಯಗಳು ಅಗತ್ಯ ವಸ್ತುಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪಾರದರ್ಶಕವಾಗಿ ಸಂಗ್ರಹಿಸಿ ಸಾಗಿಸಿವಿತರಿಸುವ ಮುಖ್ಯ ಜವಾಬ್ದಾರಿಯನ್ನು ಹೊಂದಿದೆ ಎಂದರು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಆಹಾರ ಸಾಮಗ್ರಿಗಳನ್ನು ಮತ್ತು ಇತರೆ ಅಗತ್ಯ ವಸ್ತುಗಳನ್ನು ಪಾರದರ್ಶಕ ರೀತಿಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಸುವುದು ಮತ್ತು ಸರ್ಕಾರದ ಇತರ ಯೋಜನೆಗಳ ಅನುಷ್ಟಾನದಲ್ಲೂ ಕೆಲಸ ಮಾಡುತ್ತದೆ ಎಂದ ಅವರು, ಪಡಿತರ ವ್ಯವಸ್ಥೆ ಬಲಪಡಿಸುವುದು, ಅಗತ್ಯ ವಸ್ತುಗಳ ಸಾಗಣೆ ಮತ್ತು ವಿತರಣೆ ಕಾರ್ಯಗಳು, ಗೋದಿ, ಅಕ್ಕಿ ಸಕ್ಕರೆ ಎಣ್ಣೆ ಮುಂತಾದ ವಸ್ತುಗಳನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಳಿಗೆ ಬದ್ದತೆಯಿಂದ ತಲುಪಿಸುವ ಸಂಸ್ಥೆಯಾಗಿದ್ದು, ತಮಗೆ ನೀಡಿರುವ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಇದು ಸರ್ಕಾರದ ಆಹಾರ ಭದ್ರತಾ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ, ಪಡಿತರ ವಿತರಣೆಯಲ್ಲೂ ಮುಖ್ಯಪಾತ್ರ ವಹಿಸುತ್ತಿದ್ದು, ಈ ಕಾರ್ಯದಲ್ಲಿ ಬದ್ದತೆಯಿಂದ ಹಾಗೂ ಸಚಿವ ಕೆ.ಎಚ್.ಮುನಿಯಪ್ಪ ಅವರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ತಮ್ಮನ್ನು ಗುರುತಿಸಿ ಈ ಗುರುತರ ಜವಾಬ್ದಾರಿ ನೀಡಿದ್ದಕ್ಕಾಗಿ ಸಚಿವರಿಗೆ, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ಸಂಪುಟದ ಎಲ್ಲಾ ಸಚಿವರಿಗೂ ಅವರು ಧನ್ಯವಾದ ಸಲ್ಲಿಸಿದರು.
ಊರುಬಾಗಿಲು ಶ್ರೀನಿವಾಸ್ ಅಧಿಕಾರ ಸ್ಪೀಕಾರದ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ನಗರಸಭೆ ಸದಸ್ಯರಾದ ಮುರಳಿಗೌಡ, ಮಾಜಿ ಸದಸ್ಯ ಸೋಮಶೇಖರ್, ನಿಗಮದ ನಿರ್ದೇಶಕರಾದ ಜಗದೀಶ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್ ಮತ್ತಿತರರು ಹಾಜರಿದ್ದು, ಅಭಿನಂದಿಸಿದರು.
























