Home ಜಿಲ್ಲೆ ನಶೆಮುಕ್ತ ಸಮಾಜ ಮತ್ತು ದೈಹಿಕ ತಾಕತ್ತಿಗಾಗಿ ‘ಆರೋಗ್ಯ ಓಟ’ :ಎಸ್.ಪಿ. ಪೃಥ್ವಿಕ್ ಶಂಕರ್

ನಶೆಮುಕ್ತ ಸಮಾಜ ಮತ್ತು ದೈಹಿಕ ತಾಕತ್ತಿಗಾಗಿ ‘ಆರೋಗ್ಯ ಓಟ’ :ಎಸ್.ಪಿ. ಪೃಥ್ವಿಕ್ ಶಂಕರ್

ಯಾದಗಿರಿ: ಮಾ.೨:ಆರೋಗ್ಯದ ಮಹತ್ವವನ್ನು ಸಮಾಜಕ್ಕೆ ಮನವರಿಕೆ ಮಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ ‘ಆರೋಗ್ಯಕ್ಕಾಗಿ ಓಟ’ ಕಾರ್ಯಕ್ರಮಕ್ಕೆ ಭಾನುವಾರ ಭರ್ಜರಿ ಪ್ರತಿಕ್ರಿಯೆ ದೊರೆಯಿತು. ನಗರದ ಲುಂಬಿನಿ ವನದಲ್ಲಿ ನಡೆದ ಈ ಜಾಗೃತಿ ಅಭಿಯಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಪ್ರಮುಖ ಸಂದೇಶ ನೀಡಿದರು.

“ಹಣ, ಆಸ್ತಿ ಎಲ್ಲವೂ ನಂತರದವು; ಮೊದಲಿಗೆ ಬೇಕಾಗಿರುವುದು ಆರೋಗ್ಯ. ದೇಹವನ್ನು ಕಾಪಾಡಿಕೊಳ್ಳುವುದೇ ನಮ್ಮ ಮೊದಲ ಕರ್ತವ್ಯ. ನಿಯಮಿತ ವ್ಯಾಯಾಮ, ಓಟ ಮತ್ತು ಕ್ರೀಡಾ ಚಟುವಟಿಕೆಗಳಿಂದ ಆರೋಗ್ಯವನ್ನು ಸದೃಢಗೊಳಿಸಬಹುದು” ಎಂದು ಅವರು ಹೇಳಿದರು. ನಶೆಮುಕ್ತ ಹಾಗೂ ಅಪರಾಧಮುಕ್ತ ಸಮಾಜ ನಿರ್ಮಾಣಕ್ಕೆ ಯುವಕರು ಮುಂದೆ ಬರಬೇಕು ಎಂದು ಕರೆ ನೀಡಿದರು.

ಸೈಬರ್ ಅಪರಾಧಗಳ ಹೆಚ್ಚುತ್ತಿರುವ ಹಿನ್ನೆಲೆ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ೧೧೨ ಸಹಾಯವಾಣಿ ಸಂಪರ್ಕಿಸಿ ಪೊಲೀಸರ ಸಹಾಯ ಪಡೆಯಬಹುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ೫ ಕಿಮೀ ಮತ್ತು ೧೦ ಕಿಮೀ ಓಟದ ಸ್ಪರ್ಧೆಗಳು ನಡೆಯಿದ್ದು, ವಿವಿಧ ವಯೋಮಾನದ ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು, ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು ೬೫೦ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ವಿಜೇತರಿಗೆ ಪದಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಹೆಚ್ಚುವರಿ ಎಸ್‌ಪಿ, ಡಿವೈಎಸ್‌ಪಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದು, ಆರೋಗ್ಯ ಜಾಗೃತಿಗೆ ಬೆಂಬಲ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮವು ಕೇವಲ ಓಟಕ್ಕೆ ಸೀಮಿತವಾಗದೇ, ಉತ್ತಮ ಜೀವನಶೈಲಿ ಮತ್ತು ಸಮಾಜಮುಖಿ ಜಾಗೃತಿಗೆ ದಾರಿಯಾಯಿತು.