
ಸಂಜೆವಾಣಿ ನ್ಯೂಸ್
ಮೈಸೂರು:ಏ.28:- ಮಾನಂದವಾಡಿ ರಸ್ತೆಯ ಒಂದು ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆಯ ವೈಟ್ ಟಾಪಿಂಗ್ ಕೆಲಸ ಪ್ರಾರಂಭವಾಗಿದ್ದು, ಸದರಿ ಕಾಮಗಾರಿ ನಿರ್ವಹಿಸುವ ಸಂದರ್ಭದಲ್ಲಿ ಅಗತ್ಯವಿರುವ ಇನ್ನಿತರ ಎಲ್ಲಾ ಸೌಕರ್ಯಗಳನ್ನು ಅಳವಡಿಸುವ ದೂರದೃಷ್ಟಿಯನ್ನಿಟ್ಟುಕೊಂಡು ಅಚ್ಚುಕಟ್ಟಾಗಿ ಕಾಮಗಾರಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ.ಜಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ ಇತರೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ನಗರದ 12 ರಸ್ತೆಗಳಿಗೆ ವೈಟ್ ಟಾಪಿಂಗ್ ಕಾಮಗಾರಿ ಅನುಮೋದನೆಯಾಗಿದ್ದು, ಮಾನಂದವಾಡಿ ರಸ್ತೆ, ಬೋಗಾದಿ ರಸ್ತೆ ಹಾಗೂ ವಿಶ್ವಮಾನವ ಜೋಡಿ ರಸ್ತೆಗಳಲ್ಲಿ ಮೊದಲ ಹಂತದಲ್ಲಿ ಕಾಮಗಾರಿ ಪ್ರಾರಂಭವಾಗುತ್ತಿದೆ ಎಂದರು.
ಮಹಾಗರ ಪಾಲಿಕೆ ಅಧಿಕಾರಿಗಳು ಕುಡಿಯುವ ನೀರು ಸರಬರಾಜು, ಒಳಚರಂಡಿ ಹಾಗೂ ಚೆಸ್ಕಾಂ ಅವರು ವಿದ್ಯುತ್ ಕೇಬಲ್ ಬಗ್ಗೆ ಕಾಮಗಾರಿ ಪ್ರಾರಂಭಕ್ಕೂ ಮುನ್ನ ವ್ಯವಸ್ಥೆಗಳಿಗೆ ತೊಂದರೆಯಾಗದಂತೆ ನೋಡಿಕೊಂಡು ವರದಿ ನೀಡಬೇಕು. ನಂತರ ರಸ್ತೆಯ ಕಾಂಕ್ರೀಟ್ ಕೆಲಸ ಪ್ರಾರಂಭಿಸಬೇಕು. ರಸ್ತೆಯಾದ ನಂತರ ಅಗೆಯುವುದು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೋಗಾದಿಯ ವೈಟ್ ಟಾಪಿಂಗ್ ಕೆಲಸ ಪ್ರಾರಂಭಕ್ಕೂ ಮುನ್ನ ಲೋಕೋಪಯೋಗಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ಎರಡು ದಿನದೊಳಗಾಗಿ ವರದಿ ನೀಡಿ ನಂತರ ಕಾಮಗಾರಿ ಪ್ರಾರಂಭಿಸುವಂತೆ ತಿಳಿಸಿದರು.
ಚೆಸ್ಕಾಂ ವತಿಯಿಂದ ನಗರದ 400 ಕಿ.ಮೀ ವ್ಯಾಪ್ತಿಯಲ್ಲಿ ಭೂಗತ ಕೇಬಲಿಂಗ್ ಕೆಲಸ ನಡೆಯುತ್ತಿದ್ದು, ಕೆಲಸ ನಡೆಯುವ ಸಂದರ್ಭದಲ್ಲಿ ಒಳಚರಂಡಿ, ಕುಡಿಯುವ ನೀರಿನ ಪೈಪ್ ಲೈನ್‍ಗೆ ಹಾನಿಯಾದಲ್ಲಿ ಒಂದು ದಿನದೊಳಗಾಗಿ ಸರಿಪಡಿಸಿ ನಂತರ ಕಾಮಗಾರಿ ಮುಂದುವರೆಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ಎಂದರು.
ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಕಾರ್ಯಪಾಲಕ ಅಭಿಯಂತರ ಮಂಜು, ಚೆಸ್ಕಾಂ ಅಧೀಕ್ಷಕ ಅಭಿಯಂತರ ಸುನೀಲ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

























