Home ಜಿಲ್ಲೆ ಮೈಸೂರು ಸ್ವಾತಂತ್ರ್ಯೋತ್ಸವ ಸ್ವಚ್ಛತಾ ಅಭಿಯಾನ-2026ಕ್ಕೆ ಚಾಲನೆ

ಸ್ವಾತಂತ್ರ್ಯೋತ್ಸವ ಸ್ವಚ್ಛತಾ ಅಭಿಯಾನ-2026ಕ್ಕೆ ಚಾಲನೆ

ಸಂಜೆವಾಣಿ ನ್ಯೂಸ್
ಮೈಸೂರು,ಆ.06:
80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ ಸ್ವಾತಂತ್ರ್ಯೋತ್ಸವ ಸ್ವಚ್ಛತಾ ಅಭಿಯಾನ-2026: 80 ತ್ಯಾಜ್ಯಮುಕ್ತ ತಾಣಗಳು ಅಭಿಯಾನದ ಭಾಗವಾಗಿ ಬುಧವಾರ ಚಿಕ್ಕ ವೀರಣ್ಣ ರಸ್ತೆ – ಸಿ.ವಿ. ರಸ್ತೆ ಪ್ರದೇಶದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಯಿತು.
ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಸವಿತಾ ಎಂ.ಕೆ., ಹೆಚ್ಚುವರಿ ಆಯುಕ್ತೆ ವೀಣಾ, ಅಧೀಕ್ಷಕ ಅಭಿಯಂತರ ಸಿಂಧು, ಮುಖ್ಯ ಲೆಕ್ಕಾಧಿಕಾರಿ ಶ್ವೇತಾ, ಕಾರ್ಯಪಾಲಕ ಅಭಿಯಂತರರಾದ ಮೃತ್ಯುಂಜಯ, ಶ್ರೀನಿವಾಸ್, ಮೋಹನ್, ದೀಪಕ್, ವಲಯ ಸಹಾಯಕ ಆಯುಕ್ತೆ ರತ್ನಾಂಬಿಕಾ ಸೇರಿದಂತೆ ಪಾಲಿಕೆ ಅಧಿಕಾರಿಗಳು, ಪೌರಕಾರ್ಮಿಕರು, ಸ್ಥಳೀಯ ನಿವಾಸಿಗಳು ಮತ್ತು ಸಿ.ವಿ. ರಸ್ತೆ ನಿವಾಸಿಗಳ ಸಂಘದ ಪದಾಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ದೀರ್ಘಕಾಲದಿಂದ ಸಂಗ್ರಹವಾಗಿದ್ದ ಮಿಶ್ರ ತ್ಯಾಜ್ಯ, ಹಳೆಯ ವಸ್ತುಗಳು, ಲೋಹದ ಅವಶೇಷಗಳು, ಪ್ಲಾಸ್ಟಿಕ್, ಕಟ್ಟಡ ಅವಶೇಷಗಳು ಸೇರಿದಂತೆ ಒಟ್ಟು 83 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.


ಸ್ವಚ್ಛತಾ ಕಾರ್ಯಕ್ಕಾಗಿ 5 ಬ್ಯಾಕ್‍ಹೋ ಲೋಡರ್‍ಗಳು, 10 ಟಿಪ್ಪರ್ ವಾಹನಗಳು ಹಾಗೂ 5 ಡೋಜರ್‍ಗಳನ್ನು ಬಳಸಲಾಯಿತು. ಸಾರ್ವಜನಿಕ ಸ್ಥಳದಲ್ಲಿದ್ದ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.


ಅಂಗಡಿ ಮಾಲೀಕರು, ಗುಜರಿ ವ್ಯಾಪಾರಿಗಳು ಮತ್ತು ಇತರೆ ವಾಣಿಜ್ಯ ಸಂಸ್ಥೆಗಳಿಗೆ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಸುರಿಯದಂತೆ ಸೂಚಿಸಲಾಯಿತು. ತ್ಯಾಜ್ಯವನ್ನು ಪ್ರತ್ಯೇಕಿಸಿ ಪಾಲಿಕೆ ಸೂಚಿಸುವ ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿ ಮಾಡುವಂತೆ ಜಾಗೃತಿ ಮೂಡಿಸಲಾಯಿತು.
ಮುಂದಿನ ದಿನಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ಸುರಿಸುವುದು ಅಥವಾ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸುವುದು ಕಂಡುಬಂದಲ್ಲಿ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು. ಸ್ವಚ್ಛಗೊಳಿಸಿದ ಪ್ರದೇಶದಲ್ಲಿ ಮರು ತ್ಯಾಜ್ಯ ಸುರಿಯದಂತೆ ನಿರಂತರ ನಿಗಾ ವಹಿಸಲು ವಲಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.


ಸ್ವಚ್ಛ ಸಿ.ವಿ. ರಸ್ತೆ – ಆರೋಗ್ಯಕರ ಮೈಸೂರು” ಎಂಬ ಆಶಯದೊಂದಿಗೆ ನಡೆದ ಈ ಕಾರ್ಯಾಚರಣೆ ಅಧಿಕಾರಿಗಳು, ಪೌರಕಾರ್ಮಿಕರು ಮತ್ತು ಸ್ಥಳೀಯರ ಸಹಭಾಗಿತ್ವದಲ್ಲಿ ಯಶಸ್ವಿಯಾಯಿತು.