Home ಜಿಲ್ಲೆ ಮೈಸೂರು ರೈತರ ಸಾಲ ಮನ್ನಾ, ಪ್ರತಿ ಲೀ. ಹಾಲಿಗೆ 50 ನೀಡಲು ಆಗ್ರಹ: ಅಂಚೆ ಚಳುವಳಿಗೆ ಕರೆ

ರೈತರ ಸಾಲ ಮನ್ನಾ, ಪ್ರತಿ ಲೀ. ಹಾಲಿಗೆ 50 ನೀಡಲು ಆಗ್ರಹ: ಅಂಚೆ ಚಳುವಳಿಗೆ ಕರೆ

ಸಂಜೆವಾಣಿ ನ್ಯೂಸ್
ಮೈಸೂರು.ಆ.05 :
ಮುಂಗಾರು ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತುರ್ತು ಬರ ಪರಿಹಾರ ಘೋಷಿಸಿ, ಪ್ರತಿ ಎಕರೆಗೆ 50,000 ನೀಡಬೇಕು ಮತ್ತು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಭಾರತೀಯ ಕಿಸಾನ್ ಸಂಘ ತಿ.ನರಸೀಪುರ ತಾಲೂಕು ಘಟಕ ಆಗ್ರಹಿಸಿದೆ.


ಸಂಘದ ಮಾಸಿಕ ಸಭೆ ತಿ.ನರಸೀಪುರದಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು ಅಧ್ಯಕ್ಷ ಶಿವಕುಮಾರ್ ನಾಗಲಗೆರೆ ಮಾತನಾಡಿ, “ಈ ಬಾರಿ ಉತ್ತಮ ಮಳೆಯಿಲ್ಲದೆ ಬೆಳೆ ಇಲ್ಲದೆ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಬಿತ್ತನೆ ಬೀಜ, ಗೊಬ್ಬರ, ಉಳುಮೆ ಸೇರಿದಂತೆ ವಿವಿಧ ಬ್ಯಾಂಕ್‍ಗಳಲ್ಲಿ ಸಾಲ ಮಾಡಿರುವ ರೈತರಿಗೆ ಆ ಸಾಲವನ್ನು ಕಟ್ಟಲು ಅಥವಾ ರಿನಿವಲ್ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರೈತರ ಎಲ್ಲಾ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು” ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಹಾಲಿಗೆ 50 ನಿಗದಿಪಡಿಸಿ – ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗ್ರಹ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಗಂಡತೋರು ಮಾತನಾಡಿ, “ರೈತರು ಪ್ರತಿ ಹಳ್ಳಿಗಳಲ್ಲೂ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ 36 + 4 = 40 ನೀಡಲಾಗುತ್ತಿದೆ. ಆದರೆ ಹುಲ್ಲು, ನೀರು, ಮೇವು, ತಿಂಡಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಹಣ ಹೈನೋದ್ಯಮಕ್ಕೆ ಸಾಕಾಗುವುದಿಲ್ಲ” ಎಂದು ಹೇಳಿದರು.


ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸರ್ಕಾರಗಳು ಪೆÇ್ರೀತ್ಸಾಹ ಧನ ಸೇರಿ ಪ್ರತಿ ಲೀಟರ್ ಹಾಲಿಗೆ 60 ನಿಗದಿಪಡಿಸಿವೆ. ಅದೇ ರೀತಿ ಕರ್ನಾಟಕ ಸರ್ಕಾರ ಮತ್ತು ಕೆ.ಎಂ.ಎಫ್ ಒಕ್ಕೂಟಗಳು ಸೇರಿ ತಕ್ಷಣವೇ ಪ್ರತಿ ಲೀಟರ್ ಹಾಲಿಗೆ 50 ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಆಗಸ್ಟ್ 29ಕ್ಕೆ ಬೃಹತ್ ಅಂಚೆ ಚಳುವಳಿ
ಮುಂಗಾರು ವೈಫಲ್ಯದಿಂದ ಬರದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಜಿಲ್ಲಾಧ್ಯಂತ ಭಾರತೀಯ ಕಿಸಾನ್ ಸಂಘವು ವಿವಿಧ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಬೃಹತ್ ಅಂಚೆ ಚಳುವಳಿ ಹಮ್ಮಿಕೊಂಡಿದೆ.
ಆಗಸ್ಟ್ 29ರಂದು ಮೈಸೂರಿನ ಮುಖ್ಯ ಹಾಲು ಮಹಾಮಂಡಳಿ ಎದುರು ಬೃಹತ್ ಚಳುವಳಿ ನಡೆಸಲು ತೀರ್ಮಾನಿಸಲಾಗಿದೆ. ರೈತರೆಲ್ಲರೂ ಸಹಕರಿಸಬೇಕೆಂದು ಸಭೆಯಲ್ಲಿ ಮನವಿ ಮಾಡಲಾಯಿತು.


ಸಭೆಯಲ್ಲಿ ಉಪಾಧ್ಯಕ್ಷರಾದ ಪರಮೇಶ್ ಬೆನಕನಹಳ್ಳಿ, ಪ್ರಭು ಮಾಲಂಗಿ, ಜಯಶೀಲ ಬನ್ನಳ್ಳಿಹುಂಡಿ, ನಾಗರಾಜು ಮಾರಾಡೀಪುರ, ಮಹಿಳಾ ಪ್ರಮುಖರಾದ ಮಹದೇವಮ್ಮ, ಕಾರ್ಯದರ್ಶಿ ಪ್ರಭಾಕರ, ಮುಕುಂದ, ಜಗದೀಶ್, ಮಹೇಶ್, ಬೋರೆಗೌಡ, ಶಂಕರ, ಲಿಂಗರಾಜು, ರಾಜಶೇಖರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.