Home ಜಿಲ್ಲೆ ಮೈಸೂರು ಮೋದಿ ಶ್ರೇಷ್ಠ ಮಿತ್ರರಲ್ಲಿ ಒಬ್ಬರು: ನೆತಾನ್ಯಾಹು

ಮೋದಿ ಶ್ರೇಷ್ಠ ಮಿತ್ರರಲ್ಲಿ ಒಬ್ಬರು: ನೆತಾನ್ಯಾಹು

ಹೊಸದೆಹಲಿ/ಜೆರುಸಲೇಂ,ಆ.4-ಬದಲಾಗುತ್ತಿರುವ ಜಾಗತಿಕ ರಾಜಕೀಯ ಸನ್ನಿವೇಶದ ಮಧ್ಯೆ ಭಾರತದೊಂದಿಗಿನ ರಾಜತಾಂತ್ರಿಕ ಬಾಂಧವ್ಯವನ್ನು ಇಸ್ರೇಲ್ ಅತ್ಯಂತ ಪ್ರಮುಖವೆಂದು ಪರಿಗಣಿಸಿದ್ದು, ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿದೆ.


ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‍ನ “ಅತ್ಯಂತ ಶ್ರೇಷ್ಠ ಮಿತ್ರರಲ್ಲಿ ಒಬ್ಬರು” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಣ್ಣಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನೆತನ್ಯಾಹು, ಇಸ್ರೇಲ್ ಜಾಗತಿಕವಾಗಿ ರಾಜತಾಂತ್ರಿಕವಾಗಿ ಒಂಟಿಯಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದರು. “ಅನೇಕರು ಇಸ್ರೇಲ್ ಒಂಟಿಯಾಗಿದೆ ಎಂದು ಹೇಳುತ್ತಾರೆ. ಆದರೆ 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ದೇಶದಿಂದ ಇಸ್ರೇಲ್‍ಗೆ ಮತ್ತು ವೈಯಕ್ತಿಕವಾಗಿ ನನಗೆ ಸಿಗುತ್ತಿರುವ ಬೆಂಬಲ ನಂಬಲಾಸಾಧ್ಯವಾದದ್ದು. ನನ್ನ ಸ್ನೇಹಿತ ನರೇಂದ್ರ ಮೋದಿ ಅವರೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಲು ನಾವು ಆದ್ಯತೆ ನೀಡುತ್ತಿದ್ದೇವೆ” ಎಂದು ಅವರು ಹೇಳಿದರು.


ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು “ಅಮೆರಿಕ ಮಾತ್ರವೇ ಇಸ್ರೇಲ್‍ನ ಪ್ರಬಲ ಮಿತ್ರ” ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ನೆತನ್ಯಾಹು ಅವರು ಭಾರತದ ಬೆಂಬಲವನ್ನು ಪ್ರಮುಖವಾಗಿ ಉಲ್ಲೇಖಿಸಿರುವುದು ಜಾಗತಿಕ ಗಮನ ಸೆಳೆದಿದೆ. ಭಾರತೀಯ ಸಾಮಾಜಿಕ ಜಾಲತಾಣಗಳಲ್ಲಿಯೂ ಇಸ್ರೇಲ್‍ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


ಈ ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‍ಗೆ ಅಧಿಕೃತ ಭೇಟಿ ನೀಡಿದ್ದ ವೇಳೆ, ಭಾರತವು ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ ಎಂದು ಪುನರುಚ್ಚರಿಸಿದ್ದರು. ಇಬ್ಬರೂ ನಾಯಕರ ನಡುವಿನ ವೈಯಕ್ತಿಕ ಸ್ನೇಹ ಮತ್ತು ರಾಜತಾಂತ್ರಿಕ ಸಂಬಂಧಗಳು ಉಭಯ ದೇಶಗಳ ರಕ್ಷಣೆ ಹಾಗೂ ತಂತ್ರಜ್ಞಾನ ವಲಯದಲ್ಲಿ ಹೊಸ ಮೈಲಿಗಲ್ಲಾಗಲಿವೆ ಎಂದು ವಿಶ್ಲೇಷಿಸಲಾಗಿದೆ.