
ವಿಧಾನ ಪರಿಷತ್ ಗೆಲುವು: ಪುತ್ತೂರಿನಲ್ಲಿ ಬಿಜೆಪಿ ಸಂಭ್ರಮಾಚರಣೆ
ಪುತ್ತೂರು: ಕರ್ನಾಟಕ ವಿಧಾನ ಪರಿಷತ್ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ೪ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪುತ್ತೂರು ಬಿಜೆಪಿಯಿಂದ ಪಕ್ಷದ ಕಛೇರಿ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಜನ ವಿರೋಧಿ ಕಾಂಗ್ರೆಸ್ ಸರಕಾರದ ವಂಚನೆ, ದುರುದ್ದೇಶ ಇಟ್ಟುಕೊಂಡು ಮಾಡುತ್ತಿರುವ ಆಡಳಿತವನ್ನು ನೋಡಿ ಜನ ಬೇಸತ್ತಿದ್ದಾರೆ. ಇದರ ಪರಿಣಾಮ ಎನ್ಡಿಎ ಮೈತ್ರಿಕೂಟಕ್ಕೆ ೪ ಸ್ಥಾನಗಳಲ್ಲೂ ಅಭೂತಪೂರ್ವ ಗೆಲುವು ಸಿಕ್ಕಿದೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ವಿಧಾನ ಪರಿಷತ್ನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ೪ ಸ್ಥಾನಗಳಲ್ಲಿ ಎನ್ಡಿಎ ಬೆಂಬಲಿಸುವ ಮೂಲಕ ಪ್ರಜ್ಞಾವಂತ ಮತದಾರರು ಒಳ್ಳೆಯ ಫಲಿತಾಂಶ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತ, ಅಭಿವೃದ್ಧಿ ಶೂನ್ಯ, ಸ್ಟಿಂಗ್ ಆಪರೇಷನ್ ಆಡಳಿತಕ್ಕೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ೨೦೨೮ ರ ಚುನಾವಣೆ ಎನ್ಡಿಎ ಚುನಾವಣೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮುಂದಿನ ಎಲ್ಲಾ ಚುನಾವಣೆಗಳು ಬ್ಯಾಲೆಟ್ ಪೇಪರ್ ಮೂಲಕ ಆಗುವುದಾದರೆ ನಾವು ಸಿದ್ದರಿದ್ದೇವೆ ಎಂದು ಅವರು ಹೇಳಿದರು. ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಸುನೀಲ್ ದಡ್ಡು ಕಾರ್ಯಕ್ರಮ ನಿರ್ವಹಿಸಿದರು.
ಬಿಜೆಪಿ ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಆರ್.ಸಿ.ನಾರಾಯಣ್, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಎಸ್. ಅಪ್ಪಯ್ಯ ಮಣಿಯಾಣಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ತಾ.ಪ.ಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ್ ನಾಯಕ್, ಯುವರಾಜ್ ಪೆರಿಯತ್ತೋಡಿ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಬಿಜೆಪಿ ಮಾಧ್ಯಮ ವಕ್ತಾರ ರಾಜೇಶ್ ಬನ್ನೂರು, ಮಹೇಶ್ ಕೇರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮೋಹನ್ ಪಕ್ಕಳ, ಯಶೋದಾ ಗೌಡ, ಯತೀಂದ್ರ ಕೊಚ್ಚಿ, ವಿಶ್ವನಾಥ ಕುಲಾಲ್, ನಾಗೇಶ್ ಕೆಮ್ಮಾಯಿ ಮೊದಲಾದವರು ಉಪಸ್ಥಿತರಿದ್ದರು.






















