Home ಜಿಲ್ಲೆ ಮಂಗಳೂರು ಉಡುಪಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಮತೀಯ ಗಲಭೆಗಳು ಆಗದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು :...

ಉಡುಪಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಮತೀಯ ಗಲಭೆಗಳು ಆಗದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು : ಯು.ನಿಸಾರ್ ಅಹ್ಮದ್

ಉಡುಪಿ, ಅಕ್ಟೋಬರ್ ೨೮ : ಶಿಕ್ಷಣ ಸಮಾಜದಲ್ಲಿ ಬದಲಾವಣೆ ತರುತ್ತದೆ. ಗುಣಮಟ್ಟದ ಶಿಕ್ಷಣವು ಜವಾಬ್ದಾರಿಯುತ ನಾಗರೀಕನಾಗಿಸುತ್ತದೆ. ಪ್ರತಿಯೊಬ್ಬರಿಗೂ ಶಿಕ್ಷಣವಂತರಾಗುವಂತೆ ನೋಡಿಕೊಳ್ಳಬೇಕೆಂದು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು.ನಿಸಾರ್ ಅಹ್ಮದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮದ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಶಿಕ್ಷಣ ಇಲ್ಲದಿದ್ದಲ್ಲಿ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅಲ್ಪಸಂಖ್ಯಾತ ಸಮುದಾಯದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ, ಬುದ್ಧ ಹಾಗೂ ಪಾರ್ಸಿ ಸಮುದಾಯಗಳು ಸೇರಿದಂತೆ ಯಾರೊಬ್ಬ ಮಕ್ಕಳು ಶಿಕ್ಷಣದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.
ಸರಕಾರಿ ಶಾಲೆಗಳಿಗೆ ನಿನ್ನೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳ ಸಂಖ್ಯೆ ೨೫ ರಿಂದ ೩೦ ಕಂಡುಬಂದಿದೆದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಗುಣಮಟ್ಟದ ಶಿಕ್ಷಣವನ್ನು ನೀಡಿದಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತದೆ. ಇದಕ್ಕೆ ಒತ್ತು ನೀಡಬೇಕು. ಇದರ ಜೊತೆಯಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಡಿ.ಡಿ.ಪಿ.ಐ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ, ಪರಿಶೀಲಿಸಬೇಕು ಎಂದರು.
ಜಿಲ್ಲೆಯಲ್ಲಿ ೧೫೨೨ ಅಂಗನವಾಡಿಗಳಿದ್ದು, ಅವುಗಳಲ್ಲಿ ೧೫೫ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಪಟ್ಟ ಅಂಗನವಾಡಿಗಳು ಇವೆ. ಅಂಗನವಾಡಿ ಕೇಂದ್ರಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದವರಿಗೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಈ ಕಾರ್ಯವನ್ನು ಮಾಡಲು ಮುಂದೆ ಬರದೇ ಇದ್ದಾಗ ಸ್ಥಳೀಯ ಅರ್ಹರನ್ನು ಮನವೊಲಿಸಿ ಹುದ್ದೆಗಳ ಭರ್ತಿಗೆ ಕ್ರಮವಹಿಸಬೇಕು, ಮೇಲ್ಮಟ್ಟದ ಅಧಿಕಾರಿಗಳು ಅಂಗನವಾಡಿಗಳಿಗೆ ಭೇಟಿ ಮಾಡಿ, ಅಲ್ಲಿನ ಹಾಜರಾತಿ ರಿಜಿಸ್ಟರ್‌ನಲ್ಲಿ ನಮೂದಿಸಿರುವಂತೆ ಎಲ್ಲಾ ಮಕ್ಕಳು ಹಾಜಗುತ್ತಿದ್ದಾರಾ ಎಂಬ ಬಗ್ಗೆ ಪರಿಶೀಲಿಸಬೇಕು. ಬಾಣಂತಿಯರಿಗೆ ಪೌಷ್ಠಿಕ ಆಹಾರಗಳನ್ನು ತಲುಪಿಸುವ ಕಾರ್ಯ ಸಮರ್ಪಕವಾಗಿ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ೭ ಸರಕಾರಿ, ೪ ಅನುದಾನಿತ ಹಾಗೂ ೧ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿದ್ದು, ಸಂಸ್ಥೆಯಲ್ಲಿ ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕು. ಹೊರ ದೇಶಗಳಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಓವರ್ ಸಿ- ಎಂಪ್ಲಾಯ್‌ಮೆಂಟ್ ಸೆಲ್‌ನ ಮಾಹಿತಿ ಪಡೆದು ಸ್ಥಳೀಯವಾಗಿ ಪ್ರಚಾರ ಪಡಿಸಿದ್ದಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ. ಇದಕ್ಕೆ ಒತ್ತು ನೀಡಬೇಕು ಎಂದರು.
ಅಲ್ಪಸಂಖ್ಯಾತರ ವಿವಿಧ ವರ್ಗದ ಕಾರ್ಮಿಕರುಗಳ ಅಂಕಿ-ಸಂಖ್ಯೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ್ ಯೋಜನೆಯಡಿ ನೋಂದಾಯಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಅಲ್ಪಸಂಖ್ಯಾತ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಗುರುತಿನ ಚೀಟಿಗಳನ್ನು ಶಿಬಿರಗಳನ್ನು ನಡೆಸಿ, ಸ್ಥಳದಲ್ಲಿಯೇ ನೀಡಬೇಕು. ನೋಂದಣಿಯದ ಕಾರ್ಮಿಕರಿಗೆ ಟೂಲ್‌ಕಿಟ್‌ಗಳನ್ನು ಸ್ಥಳೀಯವಾಗಿ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ವಿತರಿಸಬೇಕು. ಇದರಿಂದ ಕಾರ್ಮಿಕರ ನೋಂದಣಿ ಪ್ರಮಾಣ ಹೆಚ್ಚಾಗುವುದರೊಂದಿಗೆ ಕಾರ್ಮಿಕರು ಹೆಚ್ಚು ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ ೧೫ ವಿಶೇಷ ಚೇತನರ ಶಾಲೆಗಳು ಕಾರ್ಯ ನಿರ್ವಹಿಸುತ್ತಿದೆ. ಈ ಶಾಲೆಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವಂತಗಬೇಕು. ವಿಶೇಷ ಚೇತನರಲ್ಲಿ ಅದ್ಭುತ ಕೌಶಲ್ಯಗಳಿದ್ದು, ಅವರುಗಳಿಗೆ ಸೂಕ್ತ ವೇದಿಕೆ ಸಿಗುವಂತಾಗಬೇಕು ಎಂದರು.
ಬೀದಿ ಬದಿ ವ್ಯಾಪಾರಿಗಳ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕು. ಈಗಾಗಲೇ ೫೫೦೦ ಬೀದಿ ಬದಿ ವ್ಯಾಪಾರಿಗಳು ನೋಂದಾಯಿಸಿಕೊಂಡಿದ್ದಾರೆ. ಇವರುಗಳಿಗಾಗಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಈ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಈ ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಮೇಲಾಧರರಹಿತ ಸಾಲ ಪಡೆಯಲು ಅನುವು ಮಾಡಿಕೊಡಲಾಗುತ್ತಿದೆ. ಮೊದಲ ಹಂತದಲ್ಲಿ ೧೦,೦೦೦, ಎರಡನೇ ೨೫,೦೦೦ ಮತ್ತು ಮೂರನೇ ಹಂತದಲ್ಲಿ ೫೦,೦೦೦ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಇದು ಸಕಾಲಿಕ ಮರುಪಾವತಿಗೆ ಒಳಪಟ್ಟಿರುತ್ತದೆ ಎಂದರು.
ಕೃಷಿ ಇಲಾಖೆಯ ವತಿಯಿಂದ ಅಲ್ಪಸಂಖ್ಯಾತ ಸಮುದಾಯದವರಿಗೆ ೯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿವೆ. ೫೮೦೪ ಅಲ್ಪ ಸಂಖ್ಯಾತ ಸಮುದಾಯದವರು ಕೃಷಿ ಚಟುವಟಿಕೆಯಲ್ಲಿ ಕೈಗೊಂಡಿದ್ದು, ಇದರಲ್ಲಿ ೩೩೩೯ ಕೃಷಿ ಭೂಮಿ ಹೊಂದಿದ್ದಾರೆ. ೪೦೯ ಅಲ್ಪ ಸಂಖ್ಯಾತ ಸಮುದಾಯದವರು ಕೃಷಿ ಯೋಜನೆಗಳ ಸೌಲಭ್ಯ ಪಡೆದಿದ್ದು, ಸೌಲಭ್ಯ ಪಡೆದ ಫಲಾನುಭವಿಗಳ ವಿವರವನ್ನು ನೀಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ ಅವರು, ತೋಟಗಾರಿಕೆ ಇಲಾಖೆಯಡಿ ಅಲ್ಪಸಂಖ್ಯಾತ ಸಮುದಾಯಕ್ಕೆ ೯ ಯೋಜನೆಗಳನ್ನು ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ ೧೫೧ ಗುರಿಗೆ ೧೪೨ ಗುರಿ ಸಾಧನೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಜನರು ಇಲಾಖೆಯ ಯೋಜನೆಯ ಲಾಭ ಪಡೆಯುವಂತೆ ಆಗಬೇಕು ಎಂದರು.
ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತ ಸಮುದಾಯದ ೮೫೬೩ ಫಲನುಭವಿಗಳು ಬ್ಯಾಂಕ್‌ಗಳಲ್ಲಿ ವಿವಿಧ ಚಟುವಟಿಕೆಗಾಗಿ ಸಾಲ ಸೌಲಭ್ಯ ಹೊಂದಿದ್ದಾರೆ. ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಬ್ಯಾಂಕ್‌ಗಳಿಂದ ಶೈಕ್ಷಣಿಕ ಸಹಾಯಧನ ಸೌಲಭ್ಯಗಳು ಲಭ್ಯವಿದ್ದು, ಇದರ ಸದುಪಯೋಗವನ್ನು ಸಮುದಾಯದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಯಾವುದೇ ರೀತಿಯ ಮತೀಯ ಗಲಭೆಗಳು ಆಗದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು. ಕೋಮು ಸೌಹಾರ್ದತೆಗೆ ಆದ್ಯತೆ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಮತೀಯ ಭಾವನೆಗಳನ್ನು ಕೆರಳಿಸುವಂತಹವುಗಳಿದ್ದಲ್ಲಿ ನಿರ್ಧಾಕ್ಷಿಣ್ಯವಾಗಿ ನಿರ್ಲಕ್ಷಿಸದೇ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದ ಅವರು, ಪ್ರಸ್ತುತ ಜಿಲ್ಲೆಯಲ್ಲಿ ಈ ಸಂಬಂಧ ಪ್ರಕರಣಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಬೇಕೆಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಅದರ ಸಂಪೂರ್ಣ ಪ್ರಯೋಜನವನ್ನು ಸಮುದಾಯದ ಜನರು ಸಮರ್ಪಕವಾಗಿ ಪಡೆಯುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಸಾಂವಿಧಾನಿಕವಾಗಿ ಪ್ರತಿಯೊಬ್ಬ ೧೪ ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ನೀಡಬೇಕು. ಯಾವೊಬ್ಬ ಮಕ್ಕಳು ಸಹ ಶಾಲೆಯಿಂದ ಹೊರಗುಳಿಯದಂತೆ ಎಚ್ಚರಿಕೆಯನ್ನು ವಹಿಸಿ, ಇದು ನಮ್ಮ ಜವಾಬ್ದಾರಿಯಾಗಿದೆ. ಈ ಬಗ್ಗೆ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸೇವೆಯೇ ನಮ್ಮ ಧರ್ಮ ಎಂದರು.
ಸಭೆಯಲ್ಲಿ ಆಯೋಗದ ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಎ.ಎಸ್.ಪಿ ಸುಧಾಕರ ನಾಯಕ್, ಅಲ್ಪ ಸಂಖ್ಯಾತ ಸಮುದಾಯದ ಜಿಲ್ಲಾ ಅಧಿಕಾರಿ ಜಿನೇಂದ್ರ ಎಂ., ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮ ಅನುಷ್ಠಾನದ ಸದಸ್ಯರುಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.