
ಸಂಜೆವಾಣಿ ವಾರ್ತೆ
ಹನೂರು.ಆ.8 :- ತಾಲೂಕು ಕೇಂದ್ರದಲ್ಲಿ ಬಹುದಿನಗಳಿಂದ ಬೇಡಿಕೆಯಲ್ಲಿದ್ದ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ಘಟಕ 7,52 ಕೋಟಿ ರೂ. ವೆಚ್ಚದ ನಿರ್ಮಾಣ ಕಾರ್ಯಕ್ಕೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಹನೂರು ತಾಲೂಕಿನ ಮಂಗಲ ಗ್ರಾಮದ ಸರ್ವೇ ನಂ 430/ಂ1ಂ ಮತ್ತು ಲೋಕನಹಳ್ಳಿ ಹೋಬಳಿಯ ಕಣ್ಣೂರು ಗ್ರಾಮದ ಸರ್ವೇ ನಂ 1/ಃ1 ವ್ಯಾಪ್ತಿಯ ಒಟ್ಟು 4 ಎಕರೆ 0.50 ಸೆಂಟ್ಸ್ ಜಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಮರಾಜನಗರ ವಿಭಾಗದ ವತಿಯಿಂದ ಆಧುನಿಕ ಘಟಕ ನಿರ್ಮಾಣ ಮಾಡಲಾಗುತ್ತಿದೆ.
ಇದೆ ವೇಳೆ ಸಚಿವರಾದ ಪುಟ್ಟರಂಗಶೆಟ್ಟಿ ಅವರು ಮಾತನಾಡಿ
ಹನೂರು ಭಾಗದಲ್ಲಿ ಸುಸಜ್ಜಿತ ಬಸ್ ಘಟಕ ನಿರ್ಮಾಣವಾಗುವುದರಿಂದ ಗ್ರಾಮೀಣ ಹಾಗೂ ಕಾಡಂಚಿನ ಪ್ರದೇಶಗಳಿಗೆ ಹೆಚ್ಚುವರಿ ಬಸ್ ಸಂಚಾರ ಕಲ್ಪಿಸಲು ಸಾರಿಗೆ ನಿಗಮಕ್ಕೆ ನೆರವಾಗಲಿದೆ.
ಇದರಿಂದ ಸ್ಥಳೀಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸುಲಭ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ಶ್ರೀ ರೂಪ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ತಹಸೀಲ್ದಾರ್ ಕೆ.ಎನ್ ಚೈತ್ರಾ, ಮಾಜಿ ಶಾಸಕ ನರೇಂದ್ರ, ಗುತ್ತಿಗೆದಾರರಾದ ಚಂದ್ರೆಗೌಡ ಸೇರಿದಂತೆ ಇನ್ನಿತರ ಇದ್ದರು.
ಒಟ್ಟು 1682.00 ಚದರ ಮೀಟರ್ ಪ್ರದೇಶದಲ್ಲಿ ನೆಲ ಮತ್ತು ಮೊದಲ ಅಂತಸ್ತಿನ ಮುಖ್ಯ ಕಟ್ಟಡ ನಿರ್ಮಾಣವಾಗಲಿದೆ. ಮಹಿಳಾ ಮತ್ತು ಪುರುಷ ಸಿಬ್ಬಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ತಾಂತ್ರಿಕ ಸಿಬ್ಬಂದಿಗೆ ಪ್ರತ್ಯೇಕ ಕೊಠಡಿ ಇರಲಿದೆ.
ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯ ಸಂಕೀರ್ಣ, ಬಸ್‍ಗಳ ನಿರ್ವಹಣೆಗೆ ವಾಹನ ದುರಸ್ತಿ ಅಂಕಣ, ವಾಷಿಂಗ್ ರ್ಯಾಂಪ್ ಮತ್ತು ಇಂಧನ ತುಂಬಿಸುವ ಟ್ಯಾಂಕ್ ವ್ಯವಸ್ಥೆ ಇರಲಿದೆ.
ಇದಲ್ಲದೆ ಕುಡಿಯುವ ನೀರಿಗಾಗಿ ನೀರು ಶುದ್ಧೀಕರಣ ಘಟಕ, ಮಳೆ ನೀರು ಕೊಯ್ಲು, ಇಂಗು ಗುಂಡಿ ವ್ಯವಸ್ಥೆ ಹಾಗೂ ಸುರಕ್ಷತೆಗಾಗಿ ಸುತ್ತುಗೋಡೆ ಮತ್ತು ಭದ್ರತಾ ಸಿಬ್ಬಂದಿ ಕೊಠಡಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ.































