Home ವಿಶ್ವ ದಿನಾಚರಣೆ ನಾಳೆ ವಿಶ್ವ ಆನೆ ದಿನ

ನಾಳೆ ವಿಶ್ವ ಆನೆ ದಿನ

ಪ್ರತಿ ವರ್ಷ ಆಗಸ್ಟ್ 12 ರಂದು ಪ್ರಪಂಚದಾದ್ಯಂತ ಅತ್ಯಂತ ವೈಭವದಿಂದ “ವಿಶ್ವ ಆನೆ ದಿನ”ವನ್ನು ಆಚರಿಸಲಾಗುತ್ತದೆ. ಪ್ರಕೃತಿ ಮಾತೆಯ ಮಡಿಲಲ್ಲಿ ಪ್ರಮುಖ ಪಾತ್ರ ವಹಿಸುವ, ಭೂಮಿಯ ಮೇಲಿನ ಅತಿದೊಡ್ಡ ಭೂಸಸ್ತನಿಯಾಗಿರುವ ಆನೆಗಳ ಮಹತ್ವವನ್ನು ಸಮಗ್ರವಾಗಿ ಸಾರುವುದು ಮತ್ತು ಅವುಗಳ ರಕ್ಷಣೆಗೆ ಶ್ರಮಿಸುವುದು ಈ ದಿನದ ಮೂಲ ಉದ್ದೇಶವಾಗಿದೆ. ‘ಆನೆ’ ಎಂಬ ಪದವು ಗ್ರೀಕ್ ಭಾಷೆಯ “ಎಲಿಫಾಸ್” ಎಂಬ ಪದದಿಂದ ಹುಟ್ಟಿಕೊಂಡಿದ್ದು, ಇದರ ಅರ್ಥ ದಂತ ಎಂಬುದಾಗಿದೆ. ಪ್ರಾಚೀನ ಕಾಲದಿಂದಲೂ ಆನೆಯು ವೈಭವ ಮತ್ತು ರಾಜಮನೆತನದ ಸಂಕೇತವಾಗಿ ಬೆಳೆದುಬಂದಿದ್ದು, ಯುದ್ಧಗಳಿಂದ ಹಿಡಿದು ಸಾಂಪ್ರದಾಯಿಕ ವೈಭವದ ಮೆರವಣಿಗೆಗಳವರೆಗೆ ಪ್ರತಿಯೊಂದರಲ್ಲೂ ಪ್ರಮುಖ ಭಾಗವಾಗಿದೆ. ಇಷ್ಟೇ ಅಲ್ಲದೆ, ಪ್ರಕೃತಿಯಲ್ಲಿ ಅತ್ಯಂತ ಶಾಂತಮಯ ಹಾಗೂ ಪ್ರೀತಿಯ ಜೀವಿಗಳಲ್ಲಿ ಆನೆಯೂ ಒಂದಾಗಿದೆ.

ಆಫ್ರಿಕನ್ ಆನೆಗಳು ಪ್ರಪಂಚದಲ್ಲೇ ಅತ್ಯಂತ ಬೃಹತ್ ಗಾತ್ರದ ಭೂಸಸ್ತನಿಗಳಾಗಿದ್ದು, ಗಂಡು ಆನೆಗಳು ಸರಾಸರಿ 3 ಮೀಟರ್ ಎತ್ತರ ಹಾಗೂ ಸುಮಾರು 6 ಟನ್‍ಗಳಷ್ಟು ಭಾರೀ ತೂಕವನ್ನು ಹೊಂದಿರುತ್ತವೆ. ಇವು ಹುಟ್ಟಿದಾಗಲೇ ಸುಮಾರು 120 ಕಿಲೋಗ್ರಾಂಗಳಷ್ಟು ತೂಕವಿದ್ದು, ತಮ್ಮ 35 ರಿಂದ 40 ನೇ ವಯಸ್ಸಿನಲ್ಲಿ ಪೂರ್ಣ ಪ್ರಮಾಣದ ದೇಹದ ಅಳತೆಯನ್ನು ಪಡೆದುಕೊಳ್ಳುತ್ತವೆ. ಇವುಗಳ ಜೀವಿತಾವಧಿ ಸಾಮಾನ್ಯವಾಗಿ 60 ರಿಂದ 70 ವರ್ಷಗಳಾಗಿರುತ್ತದೆ. ಆನೆಗಳ ಚರ್ಮದ ಹೆಚ್ಚಿನ ಭಾಗವು 2.5 ಸೆಂಟಿಮೀಟರ್‍ನಷ್ಟು ದಪ್ಪವಾಗಿದ್ದು, ಚರ್ಮದಲ್ಲಿರುವ ಸುಕ್ಕುಗಳು ಮತ್ತು ಮಡಿಕೆಗಳು ಸಾಮಾನ್ಯ ಚರ್ಮಕ್ಕಿಂತ 10 ಪಟ್ಟು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವ ಅದ್ಭುತ ಸಾಮಥ್ರ್ಯವನ್ನು ಹೊಂದಿವೆ. ಇದು ಅವುಗಳ ದೇಹವನ್ನು ತಂಪಾಗಿಡಲು ನೆರವಾಗುತ್ತದೆ. ಕಠಿಣ ಸೂರ್ಯನ ತಾಪದಿಂದ ರಕ್ಷಿಸಿಕೊಳ್ಳಲು ಹಾಗೂ ಚರ್ಮದ ನೈರ್ಮಲ್ಯಕ್ಕಾಗಿ ಆನೆಗಳು ಧೂಳು ಮತ್ತು ಕೆಸರಿನಲ್ಲಿ ಸ್ನಾನ ಮಾಡುತ್ತವೆ.

ಆನೆಯ ಮತ್ತೊಂದು ಆಕರ್ಷಕ ಭಾಗವೆಂದರೆ ಅದರ ಸೊಂಡಿಲು, ಇದು ಸರಿಸುಮಾರು 150,000 ಸ್ನಾಯು ಘಟಕಗಳಿಂದ ಮಾಡಲ್ಪಟ್ಟಿದೆ. ಅತ್ಯಂತ ಸೂಕ್ಷ್ಮವಾದ ಕಡಲೆಕಾಯಿಯ ಸಿಪ್ಪೆ ತೆಗೆದು ತಿನ್ನುವುದರಿಂದ ಹಿಡಿದು, ಒಂದೇ ಬಾರಿಗೆ 8 ಲೀಟರ್‍ಗಳಷ್ಟು ನೀರನ್ನು ಹೀರಿಕೊಂಡು ಕುಡಿಯುವವರೆಗೆ ಸೊಂಡಿಲು ಸಹಾಯ ಮಾಡುತ್ತದೆ. ಈಜುವಾಗ ಸೊಂಡಿಲನ್ನು ಸ್ನಾರ್ಕೆಲ್ ರೀತಿಯಲ್ಲಿ ಉಸಿರಾಟಕ್ಕೂ ಬಳಸಿಕೊಳ್ಳುತ್ತವೆ. ಇನ್ನು ಆನೆಗಳಿಗೆ ಸುಮಾರು 2 ವರ್ಷ ವಯಸ್ಸಾದಾಗ ಮೊದಲು ಕಾಣಿಸಿಕೊಳ್ಳುವ ಉದ್ದನೆಯ ಹಲ್ಲುಗಳೇ ದಂತಗಳು. ಇವು ಆನೆ ಬೆಳೆದಂತೆಲ್ಲಾ ಬೆಳೆಯುತ್ತಾ ಹೋಗುತ್ತವೆ. ಮರಗಳ ತೊಗಟೆಯನ್ನು ಸುಲಿಯಲು, ಬೇರುಗಳನ್ನು ಅಗೆಯಲು ಹಾಗೂ ಶತ್ರುಗಳಿಂದ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಇವು ಈ ದಂತಗಳನ್ನು ಬಳಸುತ್ತವೆ. ಆದರೆ, ದುರದೃಷ್ಟವಶಾತ್ ಇದೇ ದಂತಗಳಿಗಾಗಿ ಆನೆಗಳನ್ನು ಅಕ್ರಮವಾಗಿ ಬೇಟೆಯಾಡಲಾಗುತ್ತಿದೆ.

ವಿಶಾಲ ಕಾಯ ಹೊಂದಿರುವ ಆನೆಗಳಿಗೆ ದಿನಕ್ಕೆ ಸುಮಾರು 150 ಕಿಲೋಗ್ರಾಂಗಳಷ್ಟು ಆಹಾರದ ಅಗತ್ಯವಿದ್ದು, ಅವು ತಮ್ಮ ದಿನದ ಮುಕ್ಕಾಲು ಭಾಗವನ್ನು ಆಹಾರ ಸೇವನೆಯಲ್ಲೇ ಕಳೆಯುತ್ತವೆ. ಜೊತೆಗೆ ಇವು ದಿನಕ್ಕೆ 80 ಗ್ಯಾಲನ್‍ಗಳಷ್ಟು ನೀರನ್ನು ಕುಡಿಯಬಲ್ಲವು. ಆನೆಗಳ ನೆನಪಿನ ಶಕ್ತಿಗೆ ಸಂಬಂಧಿಸಿದ ‘ಟೆಂಪೆÇರಲ್ ಲೋಬ್’ ಎಂಬ ಮೆದುಳಿನ ಭಾಗವು ಮನುಷ್ಯರಿಗಿಂತಲೂ ಅತ್ಯಂತ ದೊಡ್ಡದಾಗಿದೆ ಹಾಗೂ ಸಾಂದ್ರವಾಗಿದೆ, ಇದೇ ಕಾರಣಕ್ಕೆ “ಆನೆಗಳು ಯಾವುದನ್ನೂ ಎಂದಿಗೂ ಮರೆಯುವುದಿಲ್ಲ” ಎಂಬ ಮಾತು ಜನಪ್ರಿಯವಾಗಿದೆ. ಆನೆಗಳು ಶಬ್ದಗಳು, ದೇಹದ ಚಲನೆಗಳು, ಸ್ಪರ್ಶ ಹಾಗೂ ವಾಸನೆಯ ಮೂಲಕ ಸಂವಹನ ನಡೆಸುತ್ತವೆ. ಕೆಲವು ಶಬ್ದಗಳು ಮಾನವನ ಕಿವಿಗೂ ಕೇಳಿಸದಷ್ಟು ಸೂಕ್ಷ್ಮವಾಗಿದ್ದು, ನೆಲದಲ್ಲಿ ಕಂಪನಗಳನ್ನು ಸೃಷ್ಟಿಸುವ ಮೂಲಕವೂ ಪರಸ್ಪರ ದೂರದಲ್ಲಿರುವ ಆನೆಗಳು ಸಂಕೇತಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ.

ಸಾಮಾನ್ಯವಾಗಿ ಆನೆಗಳು ನಿಂತುಕೊಂಡು ಮತ್ತು ಮಲಗಿ ಎರಡೂ ರೀತಿಯಲ್ಲಿ ನಿದ್ರಿಸಬಲ್ಲವು. ಆದರೆ ಕಾಡಿನಲ್ಲಿ ಹೆಚ್ಚಿನ ಆನೆಗಳು ನಿಂತೇ ನಿದ್ರಿಸುತ್ತವೆ, ಏಕೆಂದರೆ ಅವುಗಳ ಭಾರೀ ದೇಹವು ನೆಲದ ಮೇಲೆ ಕುಳಿತರೆ ಗಾಯಗೊಳ್ಳುವ ಅಪಾಯವಿರುತ್ತದೆ ಹಾಗೂ ತುರ್ತು ಸಮಯದಲ್ಲಿ ತಕ್ಷಣವೇ ಚಲಿಸಲು ನಿಂತು ನಿದ್ರಿಸುವುದೇ ಸುಲಭ. ಕೆನಡಾದ ಚಲನಚಿತ್ರ ನಿರ್ದೇಶಕರಾದ ಪೆಟ್ರೀಷಿಯಾ ಸಿಮ್ಸ್, ಮೈಕೆಲ್ ಕ್ಲಾರ್ಕ್ ಮತ್ತು ಥೈಲ್ಯಾಂಡ್‍ನ ‘ಎಲಿಫೆಂಟ್ ರೀಇಂಟ್ರಡಕ್ಷನ್ ಫೌಂಡೇಶನ್’ ಸಹಯೋಗದಲ್ಲಿ 2012 ರಲ್ಲಿ ವಿಶ್ವ ಆನೆ ದಿನವನ್ನು ಪ್ರಥಮ ಬಾರಿಗೆ ಪ್ರಾರಂಭಿಸಲಾಯಿತು. ಅಳಿವಿನಂಚಿನಲ್ಲಿರುವ ಏಷ್ಯನ್ ಆನೆಗಳು ಮತ್ತು ದುರ್ಬಲ ಹಂತದಲ್ಲಿರುವ ಆಫ್ರಿಕನ್ ಆನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮುಖ್ಯ ಗುರಿಯಾಗಿದೆ.

ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟದ (IUಅಓ) ಅಂದಾಜಿನ ಪ್ರಕಾರ, ಪ್ರಸ್ತುತ ಜಗತ್ತಿನಲ್ಲಿ ಸುಮಾರು 500,000 ಆನೆಗಳಿದ್ದರೆ, ಭಾರತವು ಸುಮಾರು 40,000 ಆನೆಗಳಿಗೆ ಆಶ್ರಯ ನೀಡಿದೆ. 2017 ರ ವರದಿ ಪ್ರಕಾರ 27,312 ಏಷ್ಯನ್ ಕಾಡು ಆನೆಗಳನ್ನು ಹೊಂದಿರುವ ಭಾರತವು ಆನೆಗಳ ಸಂರಕ್ಷಣೆಯಲ್ಲಿ ಜಾಗತಿಕವಾಗಿ ಅತ್ಯಂತ ಪ್ರಮುಖ ಕೇಂದ್ರವಾಗಿದೆ. ಆದರೆ ಪ್ರಸ್ತುತ ದಿನಗಳಲ್ಲಿ ವಿಸ್ತರಿಸುತ್ತಿರುವ ನಗರಗಳು, ನಗರೀಕರಣ, ಅರಣ್ಯನಾಶ ಮತ್ತು ಕುಗ್ಗುತ್ತಿರುವ ಅರಣ್ಯ ಪ್ರದೇಶಗಳಿಂದಾಗಿ ಮಾನವ ಮತ್ತು ಆನೆಗಳ ನಡುವಿನ ಸಂಘರ್ಷಗಳು ನಿರಂತರವಾಗಿ ಹೆಚ್ಚುತ್ತಿವೆ. ಆಹಾರ ಮತ್ತು ನೀರನ್ನು ಹುಡುಕುತ್ತಾ ಜನವಸತಿ ಪ್ರದೇಶಗಳಿಗೆ ಬರುವ ಆನೆಗಳು ತೊಂದರೆಗೆ ಸಿಲುಕುತ್ತಿವೆ ಹಾಗೂ ಅನೇಕ ಆನೆಗಳು ರೈಲು ಹಳಿಗಳನ್ನು ದಾಟುವಾಗ ಡಿಕ್ಕಿಯಾಗಿ ಪ್ರಾಣ ಕಳೆದುಕೊಳ್ಳುತ್ತಿವೆ. ಇಂತಹ ಸಂಘರ್ಷಗಳನ್ನು ತಪ್ಪಿಸಲು ಭಾರತದ 22 ರಾಜ್ಯಗಳಲ್ಲಿ 27 ಆನೆ ಕಾರಿಡಾರ್‍ಗಳನ್ನು ರಚಿಸಲಾಗಿದ್ದು, ಸುರಕ್ಷಿತ ಸಂಚಾರಕ್ಕೆ ಹಾದಿಮಾಡಿಕೊಡಲಾಗಿದೆ (ಆದರೆ ಜಾರ್ಖಂಡ್‍ನಲ್ಲಿ ಪ್ರಸ್ತುತ ಒಂದೂ ಮಾನ್ಯತೆ ಪಡೆದ ಕಾರಿಡಾರ್ ಇಲ್ಲ). ಆದ್ದರಿಂದ, ದಂತದ ವ್ಯಾಪಾರಕ್ಕಾಗಿ ನಡೆಯುವ ಅಕ್ರಮ ಬೇಟೆಯನ್ನು ತಡೆದು, ಈ ಅದ್ಭುತ ಜೀವಿಗಳ ಆವಾಸಸ್ಥಾನವನ್ನು ರಕ್ಷಿಸುವುದು ಪ್ರತಿಯೊಬ್ಬರ ತುರ್ತು ಕರ್ತವ್ಯವಾಗಿದೆ.